ಅನ್ಸಾರ್ ಇನೋಳಿ ಉಳ್ಳಾಲ
ಆದಾಯದ ಉದ್ದೇಶದಿಂದ ನಿರ್ಮಿಸಲಾದ, ಪ್ರತಿದಿನ ಸಾವಿರಾರು ಜನರು ವಿವಿಧ ಕಾರ್ಯಗಳಿಗೆ ಆಗಮಿಸುವ ಉಳ್ಳಾಲ ನಗರಸಭೆ ಅಧೀನದ ತೊಕ್ಕೊಟ್ಟು ವಾಣಿಜ್ಯ ಸಂಕೀರ್ಣ ಅಲೆಮಾರಿಗಳು, ಕುಡುಕರ ತಂಗುದಾಣವಾಗಿ ಮಾರ್ಪಟ್ಟಿದ್ದು ಜನ ಅಸಹ್ಯಪಡುವಂತಾಗಿದೆ.
ತೊಕ್ಕೊಟ್ಟು ಜಂಕ್ಷನ್ ಏನಿದ್ದರೂ ಉಳ್ಳಾಲ ನಗರಸಭೆಯ ಹೃದಯ ಇದ್ದಂತೆ. ನಗರಸಭೆಗೆ ಅತ್ಯಧಿಕ ಆದಾಯ ಬರುವುದೇ ತೊಕ್ಕೊಟ್ಟು ಜಂಕ್ಷನ್‌ನಿಂದ. ಇಲ್ಲಿರುವ ಬಸ್ ತಂಗುದಾಣ ದಾಟಿಯೇ ಕಾಸರಗೋಡು, ಕೊಣಾಜೆ, ಮುಡಿಪು, ಬಿ.ಸಿ.ರೋಡ್, ತಲಪಾಡಿ, ಉಳ್ಳಾಲದ ಬಸ್‌ಗಳು ಹೋಗಬೇಕು. ನಗರಸಭಾ ಅಧೀನದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ವಿವಿಧ ವ್ಯಾಪಾರಿ ಮಳಿಗೆಗಳು ಮಾತ್ರವಲ್ಲದೆ ಗ್ರಾಮಕರಣಿಕರು ಮತ್ತು ನಾಡಕಚೇರಿಯೂ ಇದೆ. ಖರೀದಿ ಹಾಗೂ ಸರ್ಕಾರಿ ಮಟ್ಟದ ಕೆಲಸಗಳಿಗಾಗಿ ಪ್ರತಿದಿನ ಇಲ್ಲಿಗೆ ಸಾವಿರಾರು ಜನರು ಬರುತ್ತಾರೆ. ಸಂಕೀರ್ಣದ ಮುಂಭಾಗದಿಂದಲೇ ಖರೀದಿ ಮಾಡಿ ಹೋಗುವವರಿಗೆ ಯಾವುದೇ ಸಮಸ್ಯೆ, ತೊಂದರೆಯೂ ಇಲ್ಲ. ಆದರೆ ಹಿಂಭಾಗದಲ್ಲಿರುವ ವ್ಯಾಪಾರಿ ಕೇಂದ್ರಗಳು, ನೆಮ್ಮದಿ ಕೇಂದ್ರ, ನಾಡಕಚೇರಿ, ಗ್ರಾಮಕರಣಿಕರ ಕಚೇರಿಗೆ ಹೋಗುವವರಿಗೆ ಯಾವಾಗ ಆಪತ್ತು ಎದುರಾಗುತ್ತದೆ ಎನ್ನುವುದನ್ನು ಹೇಳುವಂತಿಲ್ಲ.
ಏಕೆಂದರೆ ಕಟ್ಟಡದ ಹಿಂಭಾಗದಲ್ಲಿರುವ ಸ್ಥಳ ಮಾತ್ರವಲ್ಲದೆ ಮೆಟ್ಟಿಲುಗಳಲ್ಲೂ ಕುಡುಕರು, ಅಲೆಮಾರಿಗಳು ಕುಳಿತು ಪಟ್ಟಾಂಗ ಹೊಡೆಯುವುದು ಇಲ್ಲವೇ ಆರಾಮವಾಗಿ ಮಲಗಿರುವುದು ಕಂಡು ಬರುತ್ತದೆ. ಇದು ಸಾಲದ್ದಕ್ಕೆ ಗುಟ್ಕಾ ತಿಂದು ಉಗುಳಿ ಗಲೀಜು ಮಾಡುವುದೂ ಸಾಮಾನ್ಯ ವಿಚಾರ ಎನಿಸಿದೆ. ಇಲ್ಲಿನ ಗಲೀಜು ತಿನ್ನಲು ಬರುವ ಇಲಿಗಳಿಗೂ ಕೊರತೆಯಿಲ್ಲ, ಎಲ್ಲೆಲ್ಲಿಂದಲೋ ವಿಷಾಹಾರ ತಿಂದು ಬರುವ ಇಲಿಗಳು ಇಲ್ಲೇ ಸತ್ತು ಬಿದ್ದರೂ, ಅದನ್ನು ಸ್ವಚ್ಛಗೊಳಿಸುವವರೇ ಇಲ್ಲ. ಅದರ ಬದಲು ಇನ್ನಷ್ಟು ಗಲೀಜು ಮಾಡಿ ಖುಷಿಪಡುವವರಿಗೇನೂ ಕೊರತೆಯಿಲ್ಲ.
ಇತ್ತೀಚೆಗಷ್ಟೇ ಅಭಿವೃದ್ಧಿ: ನಗರಸಭೆಯಿಂದ ಇಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಗೊಂಡು ಹಲವು ವರ್ಷಗಳ ಬಳಿಕ ಅಂದರೆ ಜನವರಿಯಲ್ಲಷ್ಟೇ ಹಿಂಭಾಗಕ್ಕೆ ಇಂಟರ್‌ಲಾಕ್ ಅಳವಡಿಸಿ ಸುಂದರಗೊಳಿಸಲಾಗಿತ್ತು. ಅದುವರೆಗೆ ಈ ಭಾಗ ಪಾಳು ಬಿದ್ದ ಬಂಗ್ಲೆಯಂತಿದ್ದು, ಅತ್ಯಂತ ಅಸಹ್ಯವಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿದ್ದುದರಿಂದ ಸಾರ್ವಜನಿಕರು ಸಂಚರಿಸಲು ಹಿಂದೇಟು ಹಾಕುತ್ತಿದ್ದರು. ಹಿಂಭಾಗ ಅಭಿವೃದ್ಧಿಗೊಂಡ ಬಳಿಕವಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ಲೆಕ್ಕಾಚಾರವೂ ತಪ್ಪಾಗಿದೆ. ಹಗಲಲ್ಲೇ ಕುಡುಕರು, ಅಲೆಮಾರಿಗಳ ಹಾವಳಿಯಾದರೆ ಸಂಜೆ ಬಳಿಕ ಅನೈತಿಕ ಚಟುವಟಿಕೆಯ ತಾಣವಾಗಿ ಪರಿವರ್ತನೆಯಾಗುತ್ತಿದೆ. ಆದರೂ ಇದರ ಬಗ್ಗೆ ಗಮನಹರಿಸುವವರು ಇಲ್ಲದ ಕಾರಣ ನಗರಸಭೆ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿ ಎನಿಸಿರುವ ವಾಣಿಜ್ಯ ಸಂಕೀರ್ಣ ಅನಾಥವಾಗಿದೆ.
ಬಾರದ ವಾರದ ಸಂತೆ: ಹಿಂದೆ ಕಿರಿದಾಗಿದ್ದ ಈ ಪ್ರದೇಶ ಇಂಟರ್‌ಲಾಕ್ ಹಾಕಿದ ಬಳಿಕ ಒಂದಷ್ಟು ಅಗಲೀಕರಣಗೊಂಡು ಸೌಂದರ್ಯ ಹೆಚ್ಚಿಸಿದೆ. ಇದಕ್ಕಾಗಿ ನಗರಸಭೆಯ 14ನೇ ಹಣಕಾಸು ಯೋಜನೆಯಿಂದ 36 ಲಕ್ಷ ರೂ. ಅನುದಾನ ಮೀಸಲಿಡಲಾಗಿದ್ದು, 26 ಲಕ್ಷ ರೂ. ಖರ್ಚಾಗಿದೆ. 10 ಲಕ್ಷ ರೂ. ಅನುದಾನ ಉಳಿದಿದ್ದು, ಇದರಲ್ಲಿ ವಿದ್ಯುತ್ ದೀಪ ಸಹಿತ ವಾರದ ಸಂತೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ನಗರಸಭೆ ಯೋಜನೆ ರೂಪಿಸಿತ್ತು. ಆದರೆ ಈವರೆಗೂ ರೂಪಿತ ಯೋಜನೆ ಮಾತ್ರ ಜಾರಿಗೆ ಬಂದಿಲ್ಲ.
ವಾಣಿಜ್ಯ ಕಟ್ಟಡದಲ್ಲಿ ಸರ್ಕಾರಿ ಕಚೇರಿಗಳಿದ್ದು ಕುಡುಕರು, ಅಲೆಮಾರಿಗಳ ಸಮಸ್ಯೆ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಕಟ್ಟಡ ಪ್ರವೇಶ ತಡೆಯಲು ಗೇಟ್ ನಿರ್ಮಿಸಲಾಗುವುದು. ವಾರದ ಸಂತೆ ಹಾಗೂ ಇತರ ವಿಚಾರದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸುತ್ತೇವೆ.
ಚಿತ್ರಕಲಾ ಚಂದ್ರಕಾಂತ್, ಅಧ್ಯಕ್ಷೆ, ಉಳ್ಳಾಲ ನಗರಸಭೆ
ಸಾರ್ವಜನಿಕರು ಅಗತ್ಯ ಕೆಲಸಕ್ಕಾಗಿ ಬರುವಲ್ಲೇ ಅಲೆಮಾರಿಗಳು, ಕುಡುಕರ ಕಾಟ ಜೋರಾಗಿದೆ. ಅಲ್ಲದೆ ಕಟ್ಟಡ ಅತ್ಯಂತ ಕೊಳಕಾಗಿ ಅನೈತಿಕ ಚಟುವಟಿಕೆಯ ಕೇಂದ್ರವಾಗಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಮೌನವಾಗಿದ್ದಾರೆ. ಮುಂದಕ್ಕೆ ಅನಾಹುತ ನಡೆದರೆ ಇವರೇ ಹೊಣೆಗಾರರಾಗಿದ್ದಾರೆ. ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟ ನಡೆಸುತ್ತೇವೆ. ಅಗತ್ಯ ಎನಿಸಿದರೆ ಪ್ರಧಾನಿಗೂ ಪತ್ರ ಬರೆಯುತ್ತೇನೆ.
ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಸಾಮಾಜಿಕ ಕಾರ್ಯಕರ್ತ