ಜಿಲ್ಲೆ

ಅಕ್ರಮವಾಗಿ ವೈದ್ಯಕಿಯ ಸೀಟು ಪಡೆಯಲು ಬಂದವರು ಅಂದರ್​

ಬೆಂಗಳೂರು : ನಕಲಿ ದಾಖಲೆ ಸಲ್ಲಿಸಿ ವೈದ್ಯಕಿಯ ಸೀಟು ಪಡೆಯಲು ಮುಂದಾದ ಮೂರು ಅಭ್ಯರ್ಥಿಗಳನ್ನು ಪತ್ತೆ ಹಚ್ಚಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಇವರನ್ನು ಪೊಲೀಸ್​ ವಶಕ್ಕೆ ನೀಡಿದೆ.
ಒಬ್ಬ ಪುರಷ ಮತ್ತು ಇಬ್ಬರು ಮಹಿಳೆಯರು ಕೆಇಎಗೆ ಕಚೇರಿಗೆ ಬಂದು ದಾಖಲಾತಿಗಳನ್ನು ಸಲ್ಲಿಸುವಾಗ ಸಿಕ್ಕಿ ಬಿದ್ದಿದ್ದು, ಅಂಕಪಟ್ಟಿಗಳನ್ನು ಪರಿಶೀಲಿಸಲು ಮುಂದಾದಾಗ ಅಭ್ಯರ್ಥಿಗಳ ನಿಜ ಬಣ್ಣ ಬಲಯಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ವಶಕ್ಕೆ ನೀಡಲಾಗಿದೆ.
ಕೆಇಎ ಯುಜಿ ನೀಟ್​ನಲ್ಲಿ ಅಭ್ಯರ್ಥಿಗಳು ನೋಂದಾಯಿಸಿಕೊಂಡಿರುವ ಪ್ರಕಾರ ಅಭಯ್​ ಗೌತಮ್​, ಪರಗಿ, ಮಹೀನ್​ ನವಾಜ್​ ಅಭ್ಯರ್ಥಿಗಳು ಖಾಸಗಿ ಕೋಟಾದಡಿ ಬೆಂಗಳೂರು ಬಿಜಿಎಸ್​ ಗ್ಲೋಬಲ್​ ಇನ್​ಸ್ಟಿಟ್ಯೂಟ್​ ಮೆಡಿಕಲ್​ ಸೈನ್ಸ್​ ಸೀಟು ಪಡೆದುಕೊಂಡಿದ್ದಾರೆ.

ಖಾಸಗಿ ಕೋಟಾದ ಸೀಟು ಪಡೆದ ಅಭ್ಯರ್ಥಿಗಳು ಕಡ್ಡಾಯವಾಗಿ ಕೆಇಎ ನೈಜ ಆಂಕಪಟ್ಟಿಗಳನ್ನು ಸಲ್ಲಿಸಬೇಕಿದೆ. ಇದಕ್ಕಾಗಿ ಮಂಗಳವಾರ ಕೆಇಎ ಕಚೇರಿಗೆ ನೈಜ ಅಭ್ಯರ್ಥಿಗಳ ಬದಲು ಮಧು, ಪೂಜಾ, ಚೈತ್ರ ಎಂಬುವರು ಹಾಜರಾಗಿ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ದಾಖಲೆಗಳಲ್ಲಿರುವ ಹೆಸರು ಮತ್ತು ಕಚೇರಿಗೆ ಆಗಮಿಸಿರುವ ಅಭ್ಯರ್ಥಿಗಳು ಬೇರೆಯಾಗಿದ್ದು, ಕೆಇಎಗೆ ಅನುಮಾನ ಬಂದಿದೆ. ಈ ಹಿನ್ನೆಲೆಯಲ್ಲಿ ಅವರ ಅಂಕಪಟ್ಟಿಗಳನ್ನು ಸಿಬಿಎಸ್​ಸಿ ವೆಬ್​ಸೈಟ್​ ಮೂಲಕ ಪರಿಶೀಲಿಸಿದಾಗ ಅಂಕಪಟ್ಟಿ ಮೇಲೆ ಮುದ್ರಣವಾಗಿರುವ ಅಭ್ಯರ್ಥಿಗಳ ಪೋಟೋ ಮಾತ್ರವಲ್ಲ, ಅಂಕಪಟ್ಟಿಗಳು ಸಹ ತಾಳೆಯಾಗದೇ ಇರುವುದು ಕಂಡು ಬಂದಿದೆ. ಆನಂತರ ಅಭ್ಯರ್ಥಿಗಳನ್ನು ಪ್ರಶ್ನಿಸಲು ಆರಂಭಿಸಿದಾಗ ಮೊದಲಿಗೆ ಇಲ್ಲ ಸಲ್ಲದ ಕತೆ ಹೇಳಲು ಆರಂಭಿಸಿ ಆನಂತರ ತಾವು ಮಾಡಿದ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ. ತಕ್ಷಣ ಕೆಇಎ ಮಲ್ಲೇಶ್ವರ ಪೊಲೀಸ್​ ಠಾಣೆಗೆ ಕರೆ ಮಾಡಿ ಪೊಲೀಸರ ವಶಕ್ಕೆ ನೀಡಿದೆ.

ಮುಂದೇನು?: ಮುಂದೆ ಕೆಇಎ ನೈಜ ಅಭ್ಯರ್ಥಿಗಳಿಗೆ ನೋಟಿಸ್​ ನೀಡಲಿದ್ದು, ಅವರಿಂದ ಸ್ಪಷ್ಟನೆ ಪಡೆದ ನಂತರ ಶಿಸ್ತು ಕ್ರಮ ಜರುಗಿಸಲಿದೆ. ಸಾಮಾನ್ಯವಾಗಿ ಒಂದು ವರ್ಷ ಸೀಟು ಪಡೆಯದಂತೆ ಶಿಕ್ಷೆ ವಿಧಿಸುತ್ತದೆ. ಆದರೆ, ವಿದ್ಯಾರ್ಥಿಗಳು ಹೈಕೋರ್ಟ್​ಗೆ ಹೋಗಿ ತಡೆ ತರುವ ಸಾಧ್ಯತೆಯೇ ಹೆಚ್ಚು. ವೈದ್ಯಕಿಯ ಮತ್ತು ದಂತವೈದ್ಯಕಿಯ ಸೀಟುಗಳು ದುಬಾರಿಯಾಗಿದ್ದು, ವಿದ್ಯಾರ್ಥಿಗಳು ಹಲವಾರು ಮಾರ್ಗದ ಮೂಲಕ ಸೀಟು ಪಡೆಯಲು ಪ್ರಯತ್ನಿಸುತ್ತಾರೆ. ಏಜೆಂಟ್ಸ್​ಗಳು ಇದಕ್ಕಾಗಿ ವಿದ್ಯಾರ್ಥಿಗಳಿಂದ ಕೋಟ್ಯಾಂತರ ಹಣದ ವ್ಯವಹಾರ ನಡೆಸಿ ಮೋಸ ಮಾಡುತ್ತಾರೆ.