ಜಿಲ್ಲೆ

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿ ವಶ

ಅಭಿನಯ್ ಎಚ್.ಎಂ

ಯಳಂದೂರು: ತಾಲೂಕಿನ ಯರಗಂಬಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪಡಿತರ ಅಕ್ಕಿಯನ್ನು  ಕಂದಾಯ ಇಲಾಖೆ, ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.

ಗ್ರಾಮದ ಹೊರ ವಲಯದಲ್ಲಿರುವ ಮಹಮ್ಮದ್ ನೇಮತುಲ್ಲಾ ಅವರ ಕರಿಕಲ್ಲು ಕ್ವಾರಿ ಎದುರಿಗಿರುವ ಗೋದಾಮಿನಲ್ಲಿ ಯರಗಂಬಳ್ಳಿ ಗ್ರಾಮದ ಬಳೇಪೇಟೆಯಲ್ಲಿ ವಾಸವಾಗಿರುವ ಅಹಮ್ಮದ್ ಅವರು ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ 58 ಚೀಲಗಳಲ್ಲಿ ತುಂಬಿಟ್ಟಿದ್ದ 3050 ಕಿಲೋ ತೂಕದ, 45,750 ರೂ. ಮೌಲ್ಯದ ಪಡಿತರ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಯಾವ ವ್ಯಕ್ತಿಯೂ ಇರಲಿಲ್ಲ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.