ಕೆ.ಆರ್.ಪೇಟೆ ಹೊರವಲಯದ ರೇಷ್ಮೆ ಫಾರ್ಮ್ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಶಾಸಕ ಎಚ್.ಟಿ.ಮಂಜು ಮಾತನಾಡಿದರು.  
ಜಿಲ್ಲೆ

ಜಿಮ್, ನೆಲಹಾಸು ಸಾಮಗ್ರಿ ಖರೀದಿಯಲ್ಲಿ ಅಕ್ರಮ

ಕೆ.ಆರ್.ಪೇಟೆ: ಪಟ್ಟಣದ ತಾಲೂಕು ಸ್ಟೇಡಿಯಂನಲ್ಲಿರುವ ಒಳಾಂಗಣ ಕ್ರೀಡಾಂಗಣಕ್ಕೆ ಜಿಮ್ ಹಾಗೂ ನೆಲಹಾಸು ಸಾಮಗ್ರಿ ಖರೀದಿಯಲ್ಲಿ ನಿರ್ಮಿತಿ ಕೇಂದ್ರದ ಅಧಿಕಾರಿಗಳು 1.5 ಕೋಟಿ ರೂ. ಅವ್ಯವಹಾರ ನಡೆಸಿದ್ದು ತನಿಖೆ ನಡೆಸುವಂತೆ ಶಾಸಕ ಎಚ್.ಟಿ.ಮಂಜು ನಿರ್ದೇಶನ ನೀಡಿದರು.


ಪಟ್ಟಣ ಹೊರವಲಯದಲ್ಲಿರುವ ರೇಷ್ಮೆ ಫಾರ್ಮ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ತಾಲೂಕು ಮಟ್ಟದ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿ, ಖರೀದಿ ಸಾಮಗ್ರಿಗಳ ದರ ಮಾರುಕಟ್ಟೆ ದರಗಿಂತ ಮೂರು ಪಟ್ಟು ಹೆಚ್ಚು ಇರುವುದರಿಂದ ಸಾಮಗ್ರಿ ಖರೀದಿಯನ್ನು ಮಾಡದಂತೆ ಇಲಾಖೆ ರಾಜ್ಯ ನಿರ್ದೇಶಕರು ಆಕ್ಷೇಪಿಸಿದ್ದರು. ಅಧಿಕಾರಿಗಳು ಅಕ್ರಮವಾಗಿ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಪು ಹೆಚ್ಚಿನ ದರದಲ್ಲಿ ಅಕ್ರಮವಾಗಿ ಖರೀದಿಸಿ 1.5 ಕೋಟಿ ರೂ. ಅವ್ಯವಹಾರ ನಡೆಸಿದ್ದಾರೆ. ತನಿಖೆ ನಡೆಸಿ ತಪ್ಪಿತಸ್ಥ ನಿರ್ಮಿತಿ ಕೇಂದ್ರದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಸೂಚನೆ ನೀಡಿದರು.


ಅಬಕಾರಿ ನಿರೀಕ್ಷಕಿ ಭವ್ಯಾ, ಗ್ರಾಮಾಂತರ ಪೊಲೀಸ್ ಠಾಣೆ ನಿರೀಕ್ಷಕ ಆನಂದಗೌಡ ಸಭೆಗೆ ಬಾರದೆ ಗೈರಾಗಿದ್ದರಿಂದ ಶಾಸಕರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಮುಂದೆ ಹೀಗೆ ಮುಂದುವರಿಯದಂತೆ ಕ್ರಮವಹಿಸಲು ಸೂಚಿಸಿದರು. ಜತೆಗೆ ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಸುಬ್ಬಯ್ಯ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದರು. ಅವರ ಅಸಭ್ಯ ವರ್ತನೆ, ಕರ್ತವ್ಯ ನಿರ್ಲಕ್ಷ್ಯದ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಅಂಥವರಿಂದ ಇಲಾಖೆಗೆ ಕೆಟ್ಟ ಹೆಸರು ಬರಲಿದೆ. ಅವರ ವಿರುದ್ಧ ಕ್ರಮಕ್ಕೂ ಡಿವೈಎಸ್‌ಪಿ ಡಾ.ಸುಮಿತ್ ಅವರಿಗೆ ಹೇಳಿದರು.


ಸ್ಲಂ ಬೋರ್ಡ್‌ನಲ್ಲಿ ನಿರ್ಮಿಸುತ್ತಿರುವ ಮನೆಗಳ ಪ್ರಗತಿ ಕುಂಠಿತಕ್ಕೆ ಶಾಸಕರು ಬೇಸರ ವ್ಯಕ್ತಪಡಿಸಿದರು. ಮೂರು ವರ್ಷದಿಂದ 500 ಮನೆಗಳಿಗೆ ಹದಿನೈದು ಮನೆ ನಿರ್ಮಿಸಿಲ್ಲ. ಬೇಗ ಮನೆಗಳ ನಿರ್ಮಾಣಕ್ಕೆ ಕ್ರಮವಹಿಸುವಂತೆ ತಿಳಿಸಿದರು.


ಈಚಲುಗುಡ್ಡ ವಿದ್ಯುತ್ ಉಪಕೇಂದ್ರ ನಿರ್ಮಾಣದ ಕಾಮಗಾರಿ ಮಾಡದೆ ವಿಳಂಬ ಮಾಡಿರುವ ಗುತ್ತಿಗೆದಾರರ ಗುತ್ತಿಗೆ ರದ್ದು ಮಾಡಿ, ಮರು ಟೆಂಡರ್ ಕರೆಯುವಂತೆ ಶಾಸಕ, ಕೆಪಿಟಿಸಿಎಲ್ ಅಧಿಕಾರಿಗಳಿಗೆ ಹೇಳಿದರು. ಬೀರುವಳ್ಳಿ, ಮಡವಿನಕೋಡಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ವಿದ್ಯುತ್ ಉಪಕೇಂದ್ರವನ್ನು ಉದ್ಘಾಟಿಸುವಂತೆ ಸೂಚಿಸಿದರು. ಶಾಸಕನಾದ ಮೇಲೆ ಎಂಟು ಜನರು ವಿದ್ಯುತ್ ತಂತಿ ಅವಘಡದಿಂದ ಮೃತಪಟ್ಟಿದ್ದಾರೆ. ತಾಲೂಕಿನಲ್ಲಿ ವಿದ್ಯುತ್‌ಜಾಲ ಬಲಗೊಳಿಸುವಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಶಾಸಕರ ಕೆಡಿಪಿ ಸಭೆಗೆ ಆರು ಇಲಾಖೆ ಅಧಿಕಾರಿಗಳು ಗೈರಾಗುವ ಮೂಲಕ ತಾತ್ಸಾರ ಮಾಡಿದ್ದಾರೆ. ಕೈಗಾರಿಕಾ ವಿಸ್ತರಣಾಧಿಕಾರಿ, ಉಪ ಖಜನಾಧಿಕಾರಿ, ವಲಯ ಅರಣ್ಯಾಧಿಕಾರಿ, ಯೋಜನೆ ಇಲಾಖೆ ಸೇರಿ ಆರು ಇಲಾಖೆ ಅಧಿಕಾರಿಗಳು ಗೈರಾಗಿದ್ದರು. ಇವರ ವಿರುದ್ಧ ಶಾಸಕ ಕಿಡಿಕಾರಿದರು.


ರೈತರ ಜಮೀನಿನ ತತ್ಕಾಲ್ ಪೋಡಿ ಅರ್ಜಿ ಸಲ್ಲಿಸಿದರೂ ಹದ್ದುಬಸ್ತ್ ಏಕೆ ಮಾಡಿಕೊಡುವುದಿಲ್ಲ ಎಂದು ಎಡಿಎಆರ್ ಸಿದ್ದಯ್ಯ ಅವರನ್ನು ಪ್ರಶ್ನಿಸಿದರು. ತತ್ಕಾಲ್ ಅರ್ಜಿ ಜತೆಯಲ್ಲೇ ರೈತರ ಜಮೀನಿಗೆ ಕಲ್ಲು ಹಾಕಿ ಹದ್ದುಬಸ್ತ್ ಮಾಡಿಕೊಡಬೇಕು. ರೈತರು ಹದ್ದುಬಸ್ತ್‌ಗೆ ಮತ್ತೊಮ್ಮೆ ಅರ್ಜಿ ಹಾಕಬಾರದು. ರೈತರು ಎರಡು ಬಾರಿ ಅಲೆದಾಡುವುದನ್ನು ತಪ್ಪಿಸಬೇಕು. ಸರ್ವೇ, ಕಂದಾಯ ಹಳೇ ದಾಖಲೆಗಳು ಲಭ್ಯವಿಲ್ಲದಿದ್ದರೆ ಮರುಸೃಷ್ಟಿ ಮಾಡಿ ರೈತರಿಗೆ ನೀಡಬೇಕು. ಸರ್ಕಾರಿ ಜಾಗ ದುರಸ್ತಿ ಕಾರ್ಯ ಪ್ರಾರಂಭವಾಗಬೇಕು. ತಾಲೂಕು ಸರ್ವೇಯರ್‌ಗೆ ಅಧಿಕ ಒತ್ತಡವಿರುವುದರಿಂದ ಬೇಡಿಕೆ ಅನುಸಾರವಾಗಿ ಹೆಚ್ಚುವರಿ ಹುದ್ದೆ ಸೃಷ್ಟಿಸಿ ಸರ್ಕಾರಿ ಜಮೀನಿನ ಅಳತೆ ಕಾರ್ಯ ಬೇಗ ಮಾಡುವಂತೆ ಶಾಸಕರು ಹೇಳಿದರು.


ಸಭೆಯಲ್ಲಿ ನಾಲ್ಕು ಇಲಾಖೆಗಳ ಸಮಸ್ಯೆ ನೆನೆದು ಶಾಸಕರು ಹೌಹಾರಿದರು. ಕಂದಾಯ, ಪೊಲೀಸ್, ಪಂಚಾಯತ್, ಸರ್ವೇ ಇಲಾಖೆಗಳಲ್ಲಿ ಸಮಸ್ಯೆ ಬಗೆಹರಿದರೆ ತಾಲೂಕಿನಲ್ಲಿ ಸಮಸ್ಯೆ ಕಡಿಮೆ ಆಗಲಿವೆ ಎಂದು ಅಭಿಪ್ರಾಯಪಟ್ಟರು.


ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಬ್ಯಾಂಕ್‌ಗಳು ಸಾಲದ ಮೊತ್ತಕ್ಕೆ ಗ್ಯಾರಂಟಿ, ಸಿಬಿಲ್ ಸ್ಕೋರ್ ಕಾರಣದಿಂದ ರೈತರಿಗೆ, ಸರ್ಕಾರಿ ಸಹಾಯಧನ ಪಡೆಯುವ ಹೊಸ ಉದ್ದಿಮೆಗಳಿಗೆ ಸರ್ಕಾರದ ಕಾರ್ಯಕ್ರಮಗಳ ಪ್ರಯೋಜನ ಆಗದಿರುವ ಬಗ್ಗೆ ಶಾಸಕ ಎಳೆಎಳೆಯಾಗಿ ಬಿಚ್ಚಿಟ್ಟರು.


1.60 ಲಕ್ಷ ರೂ.ತನಕ ರೈತರಿಗೆ ಯಾವುದೇ ಗ್ಯಾರಂಟಿ ಇಲ್ಲ. ಮುದ್ರಾ ಯೋಜನೆಯಲ್ಲಿ 10 ಲಕ್ಷ ರೂ.ತನಕ ಗ್ಯಾರಂಟಿ ಇಲ್ಲದೆ ಸಾಲ ನೀಡುವಂತೆ ಸೂಚಿಸಿದರು. ತಾಲೂಕಿನಲ್ಲಿ ಈರುಳ್ಳಿ ಶೆಡ್ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆಗೆ ಸೂಚಿಸಿದರು. ರೇಷ್ಮೆ ಬಿತ್ತನೆ ಗೂಡು ಬೆಳೆಯುವ ರೈತರಿಗೆ 350 ರೂ. ಕೆಜಿಗೆ ಪ್ರೋತ್ಸಾಹ ಧನವಿರುವ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಶಾಸಕರು ಹೇಳಿದರು.


ತಾಲೂಕಿನಲ್ಲಿ ಹತ್ತು ಡೆಂಘೆ ಪ್ರಕರಣಗಳು ಪತ್ತೆಯಾಗಿವೆ. ಪ್ರಕರಣ ಹೆಚ್ಚದಂತೆ ಸೊಳ್ಳೆ ಉತ್ಪನ್ನಗಳ ತಾಣಗಳ ಪತ್ತೆ ಹಚ್ಚಿ ಸ್ವಚ್ಛತೆ ಮಾಡಬೇಕು. ರೋಗಿಗಳನ್ನು ಪರೀಕ್ಷೆಗೊಳಪಡಿಸಿ ಚಿಕಿತ್ಸೆ ನೀಡಿ. ಡೆಂಘೆ ಸಮಸ್ಯೆಗೆ ಔಷಧಗಳ ಕೊರತೆಯಾಗದಂತೆ, ರೋಗಿಗಳಿಗೆ ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಕಲ್ಪಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಅಜಿತ್‌ಗೆ ಸೂಚಿಸಿದರು.


ತಾಲೂಕಿನ ರಸ್ತೆಗಳ ಪರಿಚಯವಿಲ್ಲ. 7 ತಿಂಗಳಿಂದ ಪ್ರಗತಿ ಕಂಡಿಲ್ಲ. ಲೋಕೋಪಯೋಗಿ ಎಇಇ ಮಂಜುನಾಥ್ ವಿರುದ್ಧ ಗರಂ ಆದರು. ಶಾಸಕರ ಪ್ರಶ್ನೆಗೆ ತಡವರಿಸಿದರಿಂದ ಅಸಮಾಧಾನ ವ್ಯಕ್ತಪಡಿಸಿದರು.


ಯುಜಿಡಿಯ ಜೋನ್ 3-4 ಕ್ಕೆ ತಲಾ ಐದು ಗುಂಟೆ ಜಮೀನಿನ ಅವಶ್ಯಕತೆಯಿದೆ. ಸರ್ಕಾರಿ ಜಾಗ ಲಭ್ಯವಿಲ್ಲದಿದ್ದರೆ ಖಾಸಗಿಯವರಿಂದ ಜಮೀನನ್ನು ಖರೀದಿಸಬೇಕು. ಜೋನ್ 3-4 ಕ್ಕೆ ವೆಟ್‌ವಾಲ್ ನಿರ್ಮಿಸಬೇಕು. 15 ವರ್ಷದಿಂದ ಕಾಮಗಾರಿ ಮುಗಿದಿಲ್ಲ ಅಂದರೆ ಅರ್ಥ ಏನು? ಹೊಸ, ಹಳೇ ಕಿಕ್ಕೇರಿ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿ ತುರ್ತಾಗಿ ಮುಗಿಸಲು ಪುರಸಭೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಾಂಡವಪುರ ಎಸಿ ನಂದೀಶ್, ತಾಪಂ ಆಡಳಿತಾಧಿಕಾರಿ ರಾಜಮೂರ್ತಿ, ತಹಸೀಲ್ದಾರ್ ನಿಸರ್ಗ ಪ್ರಿಯಾ, ತಾಪಂ ಇಒ ಸತೀಶ್, ಸೆಸ್ಕ್ ಇಇ ವಿನುತಾ, ಬಿಇಒ ಸೀತರಾಮ್ ಇತರರು ಇದ್ದರು.