ಜಿಲ್ಲೆ

ಕಾನೂನುಬಾಹಿರ ಕೆಲಸ ನಿಲ್ಲಲಿ: ಮುಡಾ ಅಧಿಕಾರಿ, ಸಿಬ್ಬಂದಿಗೆ ಅಧ್ಯಕ್ಷ ಕೆ.ಮರೀಗೌಡ ಎಚ್ಚರಿಕೆ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಈಗಾಗಲೇ ಹಲವರು ಕಾನೂನುಬಾಹಿರ ಕೆಲಸ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದ್ದು, ಅದನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದರೆ ಇನ್ನು ಮುಂದೆ ಅದೇ ರೀತಿ ಮುಂದುವರಿದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಡಾ ನೂತನ ಅಧ್ಯಕ್ಷ ಕೆ.ಮರೀಗೌಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸೋಮವಾರ ಆಯೋಜಿಸಿದ್ದ ಅಧಿಕಾರಿಗಳು ಹಾಗೂ ನೌಕರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ಮೇಲೆ ವಿಶ್ವಾಸವಿಟ್ಟು ಈ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಅವರ ಹೆಸರಿಗೆ ಕಳಂಕ ಬರದಂತೆ ನಾವು ಕೆಲಸ ಮಾಡಬೇಕಾದರೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ. ಮುಡಾ ಆಸ್ತಿ ಸಾರ್ವಜನಿಕರ ಆಸ್ತಿಯಾಗಿದ್ದು, ಅದನ್ನು ಅಕ್ರಮವಾಗಿ ವಶಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಮುಡಾಕ್ಕೆ ಸೇರಿದ ಆಸ್ತಿ ಎಲ್ಲೆಲ್ಲಿ ಇದೆ ಎನ್ನುವುದನ್ನು ಪತ್ತೆ ಮಾಡಿ. ನಗರದ ಬಡವರಿಗೆ ಸೂರು ನೀಡುವ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡಬೇಕಾಗಿದೆ. ಮುಡಾ ವ್ಯಾಪ್ತಿಯಲ್ಲಿ ಬರುವ ಕೆರೆಗಳು ಒತ್ತುವರಿಯಾಗಿದ್ದು, ಅವುಗಳನ್ನು ತೆರವುಗೊಳಿಸಬೇಕು. ಕಚೇರಿಗೆ ಸಾರ್ವಜನಿಕರಿಂದ ಬರುವ ಅರ್ಜಿಗಳನ್ನು ನಮೂದಿಸುವುದರೊಂದಿಗೆ ಅರ್ಜಿ ಎಲ್ಲಿಗೆ ಹೋಗಿದೆ ಎಂಬುದನ್ನು ಕಂಪ್ಯೂಟರ್‌ನಲ್ಲಿ ದಾಖಲು ಮಾಡಿರಬೇಕು ಎಂದು ಹೇಳಿದರು.
ಮಧ್ಯವರ್ತಿಗಳ ಹಾವಳಿ:
ಮುಡಾದಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇನ್ನು ಮುಂದೆ ಮಧ್ಯವರ್ತಿಗಳಿಗೆ ಅವಕಾಶ ನೀಡಬೇಡಿ. ನನ್ನ ಗಮನಕ್ಕೆ ಬಾರದೆ ಯಾವುದೇ ಕಡತ ವಿಲೇವಾರಿ ಆಗಬಾರದು. ಕೋರ್ಟ್‌ನಲ್ಲಿ ಖಾಸಗಿ ವ್ಯಕ್ತಿಗಳ ವಿರುದ್ಧ ಮೇಲ್ಮನವಿ ಸಲ್ಲಿಸದೆ ಮುಡಾ ಆಸ್ತಿ ಖಾಸಗಿ ವ್ಯಕ್ತಿಗಳ ಪಾಲಾಗಿ ನಷ್ಟ ಆಗುತ್ತಿರುವುದನ್ನು ತಪ್ಪಿಸಬೇಕಾಗಿದೆ ಎಂದು ತಿಳಿಸಿದರು.
ಪಿಪಿಪಿ ಯೋಜನೆಯಡಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಮುಡಾಕ್ಕೆ ಆದಾಯ ಬರುವಂತೆ ಮಾಡಬೇಕು. ಸಿ.ಎ. ನಿವೇಶನ, ಎಚ್ ಪ್ರವರ್ಗದಡಿ ನಿವೇಶನ ಹಂಚಿಕೆ, ಶೇ. 50/50 ರಡಿ ರೈತರ ಸಹಭಾಗಿತ್ವದಡಿ ಬಡಾವಣೆ ನಿರ್ಮಿಸುವ ಯೋಜನೆ. ಗೃಹನಿರ್ಮಾಣ ಸಹಕಾರ ಸಂಘ ಹಾಗೂ ಖಾಸಗಿ ಬಡಾವಣೆ ಸಮಸ್ಯೆ ಬಗ್ಗೆ ಚರ್ಚಿಸಿದ ಅವರು ಕಾನೂನಿಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಬೇಡಿ. ಯಾರ ಬೆದರಿಕೆಗೂ ಹೆದರಬೇಡಿ ಎಂದ ಅಭಯ ನೀಡಿದರು.
ಮುಡಾದಿಂದ ಸ್ಥಗಿತವಾಗಿರುವ ಯೋಜನೆಗಳು ಹಾಗೂ ಸರ್ಕಾರದಿಂದ ಅನುಮೋದನೆ ಆಗಬೇಕಾಗಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಯೋಜನೆಗಳನ್ನು ಪೂರ್ಣಗೊಳಿಸೋಣ. ಎಲ್ಲರೂ ಹೊಂದಾಣಿಕೆಯಿಂದ ಕೆಲಸ ಮಾಡಿಕೊಂಡು ಹೋಗಬೇಕು ಎಂದರು.
ಮುಡಾ ಕಾರ್ಯದರ್ಶಿ ಶೇಖರ್, ನಗರ ಯೋಜನಾ ಸದಸ್ಯ ಶೇಷ, ಅಧೀಕ್ಷಕ ಇಂಜಿನಿಯರ್ ಚೆನ್ನಕೇಶವ, ಮುಖ್ಯಲೆಕ್ಕಾಧಿಕಾರಿ ಕವಿತಾ, ಆಪ್ತ ಸಹಾಯಕ ಗಂಗಾಧರ್ ಮತ್ತಿತರರಿದ್ದರು.