ಜಿಲ್ಲೆ

ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 9,250 ಕಿಲೋ ಅಕ್ಕಿ ಸಹಿತ ಲಾರಿ ಪೊಲೀಸ್ ವಶಕ್ಕೆ

ಪುತ್ತೂರು: ದಾಖಲೆ ಪತ್ರಗಳಿಲ್ಲದೆ 9,250 ಕಿಲೋ ಅಕ್ಕಿ ಸಾಗಿಸುತ್ತಿದ್ದ ಲಾರಿಯನ್ನು ಪುತ್ತೂರು ನಗರಠಾಣೆ ಪೊಲೀಸರು ಭಾನುವಾರ ರಾತ್ರಿ ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಮಾಣಿ-ಮೈಸೂರು ಹೆದ್ದಾರಿಯ ಪೋಳ್ಯದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕೆಎ 21 ಸಿ 4647 ನೋಂದಣಿ ಸಂಖ್ಯೆಯ ಲಾರಿಯನ್ನು ತಡೆಯಲಾಗಿತ್ತು. ಪರಿಶೀಲಿಸಿದಾಗ ಅವರ ಬಳಿ ಅಕ್ಕಿ ಸಾಗಣೆಗೆ ದಾಖಲೆಗಳಿಲ್ಲದೇ ಇರುವುದು ಖಚಿತವಾಗಿದೆ. ಈ ಕುರಿತು ತಹಸೀಲ್ದಾರ್​ ಅವರಿಗೆ ಮಾಹಿತಿ ನೀಡಿದ್ದರು. ಅವರ ಸೂಚನೆಯಂತೆ ಆಹಾರ ನಿರೀಕ್ಷಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.

ಬಳಿಕ ಆಹಾರ ನಿರೀಕ್ಷಕರ ಸೂಚನೆಯಂತೆ ಪೊಲೀಸರು ಅಕ್ಕಿ ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡದ್ದಲ್ಲದೆ, ಲಾರಿ ಚಾಲಕ ಬೆಳ್ಳಾರೆ ಗ್ರಾಮದ ಕಾವಿನಮೂಲೆಯ ಖಲಂದರ್ (31) ಮತ್ತು ಸವಣೂರು ಗ್ರಾಮದ ಝಖರಿಯಾ (40) ರನ್ನು ಬಂಧಿಸಿದ್ದಾರೆ.

ವಶಪಡಿಸಿಕೊಂಡಿರುವ ಅಕ್ಕಿಯ ಬೆಲೆ 2 ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ. ಅರೋಪಿಗಳ‌ ವಿರುದ್ದ ಅಕ್ರಮ‌‌ ದಾಸ್ತಾನು ಹಾಗೂ ಅಧಿಕ ಬೆಲೆ ಮಾರಾಟ ವಿರುದ್ದ ಪ್ರಕರಣ ದಾಖಲಾಗಿದೆ. ಎ.ಎಸ್.ಐ ಲೋಕನಾಥ ಸಿಬಂದಿಗಳಾದ ಜಯರಾಮ, ಪಾಟೀಲ್, ಸುಬ್ರಹ್ಮಣ್ಯ ಹಾಗೂ ಶ್ರೀಶೈಲ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.