ಜಿಲ್ಲೆ

ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆ

ವೀರೇಶ ಸೌದ್ರಿ

ಶಿವಾನಂದ ಹಿರೇಮಠ ಗದಗ
ಕೋಟ್ಯಂತರ ರೂ. ಮೊತ್ತದ ನಕಲಿ ಠರಾವು ಪ್ರಕರಣದಿಂದ ಕುಖ್ಯಾತಿ ಪಡೆದಿದ್ದ ಗದಗ ನಗರಸಭೆ ಪ್ರಸಕ್ತ ತಿಂಗಳಲ್ಲಿ ಅಂದಾಜು 9 ಕೋಟಿ ರೂ. ಮೊತ್ತದ ನೂರಕ್ಕೂ ಹೆಚ್ಚು ಕಾಮಗಾರಿಗೆ ಕಾನೂನು ಬಾಹಿರ ಟೆಂಡರ್ ಪ್ರಕ್ರಿಯೆ ನಡೆಸಿರುವುದು ಬೆಳಕಿಗೆ ಬಂದಿದೆ.

ನಗರಸಭೆ ನಡಾವಳಿಗಳನ್ನು ಪೌರಾಯುಕ್ತರು ಮತ್ತು ಅಧ್ಯಕ್ಷರು ಉಲ್ಲಂಸುತ್ತಿರವುದಾಗಿ ದೂರುಗಳು ಕೇಳಿಬರತೊಡಗಿವೆ. ಸಾಮಾನ್ಯ ಸಭೆ ಕರೆದು ಕಾಮಗಾರಿ ಬಗ್ಗೆ ಚರ್ಚಿಸಿ ಸಭೆಯ ಒಪ್ಪಿಗೆ ಪಡೆಯದೆ ಮತ್ತು ಸ್ಥಾಯಿ ಸಮಿತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚಿಸದೇ ಕೋಟ್ಯಂತರ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಜನರ ತೆರಿಗೆ ಹಣ ಬೇಕಾಬಿಟ್ಟಿ ಪೋಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ಕೆಲವಡೆ ಕಾಮಗಾರಿಗೆ ಭೂಮಿಪೂಜೆಯೂ ಜರುಗಿದ್ದು ವಿಶೇಷ.
ನಗರಸಭೆ ನಡಾವಳಿಗಳ ಉಲ್ಲಂಘನೆ ಬೆಳಕಿಗೆ ಬರುತ್ತಿದಂತೆ ಬುಧವಾರ ಸಂಜೆ ಏಕಾಏಕಿ ಸಾಮಾನ್ಯ ಸಭೆ ಕರೆದಿರುವ ನಗರಸಭೆ ಪೌರಾಯುಕ್ತರು ಮತ್ತು ಅಧ್ಯಕ್ಷರ ಕ್ರಮವನ್ನು ಉಪಾಧ್ಯಕ್ಷರೇ ವಿರೋಧಿಸಿದ್ದು ಬಿಜೆಪಿಗೆ ಮತ್ತಷ್ಟು ಮುಜುಗರ ತಂದೊಡ್ಡಿದೆ.

ಏನಿದು ಪ್ರಕರಣ?:

ಆಂತರಿಕ ಒಪ್ಪಂದದಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿಗೂ ನೂತನ ಅಧ್ಯಕ್ಷರ ಆಯ್ಕೆ ಅಥವಾ ಮುಂದುವರಿಕೆಯ ನಡಾವಳಿಗೆ ನಗರಸಭೆ ಸದಸ್ಯರು ಒಪ್ಪಿಗೆ ಸೂಚಿಸಬೇಕು. ನಗರದಲ್ಲಿ ಅಗತ್ಯವಿರುವ ಅಭಿವೃದ್ಧಿ ಕಾಮಗಾರಿಗಳಿಗೂ ನಗರಸಭೆಯ ಸಾಮಾನ್ಯ ಸಭೆ ಒಪ್ಪಿಗೆ ಸೂಚಿಸಬೇಕು. ಆದರೆ, ಕಳೆದ ಎರಡ್ಮೂರು ತಿಂಗಳಿಂದ ನಗರಸಭೆ ಸಾಮಾನ್ಯ ಸಭೆ ನಡೆದಿಲ್ಲ. ಹೀಗಿದ್ದರೂ, ಆ. 14 ಮತ್ತು 16ರಂದು ವಿವಿಧ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಕೆಲ ಕಾಮಗಾರಿಗಳಿಗೆ ಭೂಮಿ ಪೂಜೆಯೂ ಜರುಗಿದೆ. ಈ ಕಾನೂನು ಬಾಹಿರ ಪ್ರಕ್ರಿಯೆ ಮಂಗಳವಾರ ಬೆಳಕಿಗೆ ಬರುತ್ತಿದ್ದಂತೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಲ್ಲಿ ಕೆಲವರು ಬುಧವಾರ ಸಂಜೆ ಸಾಮಾನ್ಯ ಸಭೆ ಜರುಗಿಸುವಂತೆ ಪೌರಾಯುಕ್ತರನ್ನು ಒಪ್ಪಿಸಿದ್ದಾರೆ. ನಗರಸಭೆಯ ಎಲ್ಲ ಸದಸ್ಯರಿಗೆ ರಾತ್ರೋ ರಾತ್ರಿ ಸಾಮಾನ್ಯ ಸಭೆಯ ನೋಟೀಸ್ ಹಂಚಲಾಗಿದೆ. ಈ ಪ್ರಕ್ರಿಯೆಯನ್ನು ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ವಿರೋಧಿಸಿದ್ದಾರೆ.

ಜಿಲ್ಲಾಧಿಕಾರಿಗೆ ದೂರು

ಜಿಲ್ಲಾಧಿಕಾರಿಗೆ ದೂರು ನೀಡಿರುವ ಉಪಾಧ್ಯಕ್ಷೆ ಸುನಂದಾ ಬಾಕಳೆ ಸಾಮಾನ್ಯ ಸಭೆ ಕಾನೂನು ಬದ್ಧವಲ್ಲ ಎಂದು ಆರೋಪಿಸಿದ್ದಾರೆ. ‘ಆ.30ರಂದು ಸಾಮಾನ್ಯ ಸಭೆ ಜರುಗಿಸಲು ಆ. 29ರಂದೇ ನಿರ್ಧರಿಸಿ ರಾತ್ರಿ 10 ಗಂಟೆಗೆ ನೋಟೀಸ್ ಹಂಚಲಾಗಿದೆ. ಮುನ್ಸಿಪಲ್ ಕಾಯ್ದೆ 1964 ಕಲಂ 48ರ ಉಲ್ಲಂಘನೆ ಆಗಿದೆ. ಹಾಗಾಗಿ ಸಾಮಾನ್ಯ ಸಭೆ ಮುಂದೂಡಬೇಕು’ ಎಂದು ಪತ್ರದ ಮೂಲಕ ದೂರು ನೀಡಿದ್ದಾರೆ.

ತರಾತುರಿ ಟೆಂಡರ್ ಏಕೆ?

ಆ. 31ರಂದು ನಗರಸಭೆ ಪೌರಾಯುಕ್ತರು ನಿವೃತ್ತಿ ಹೊಂದಲಿದ್ದು, ಹೊಸ ಪೌರಾಯುಕ್ತರ ಅಧಿಕಾರ ಹಸ್ತಾಂತರಕ್ಕೆ ಕಾಲಾವಕಾಶ ಬೇಕು. ನಗರಸಭೆಯಲ್ಲಿ ಬಿಜೆಪಿಗೆ ಅಧಿಕಾರ ಕಳೆದುಕೊಳ್ಳುವ ಭೀತಿಯೂ ಎದುರಾಗಿದೆ. ಹೀಗಾಗಿ, ಪ್ರಭಾವಿ ಕಾಂಗ್ರೆಸ್ ಸದಸ್ಯರ ಜತೆ ಬಿಜೆಪಿ ಸದಸ್ಯರ ಹೊಂದಾಣಿಕೆ ಆಗಿದ್ದು ಕೋಟ್ಯಂತರ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ. ನಗರಸಭೆಯಲ್ಲಿ ಸ್ಥಾಯಿ ಸಮಿತಿಯ ಅಸ್ತಿತ್ವವನ್ನು ಹೋಗಲಾಡಿಸಲು ಕೆಲ ಪ್ರಭಾವಿ ಸದಸ್ಯರು ಸಾಮಾನ್ಯ ಸಭೆ ಜರುಗಿಸಲು ಹಿಂದಡಿ ಇಟ್ಟಿದ್ದಾರೆ ಎನ್ನಲಾಗಿದೆ.

ಸಭೆ ರದ್ದು

ಸದಸ್ಯರ ಒತ್ತಾಯದಿಂದ ಬುಧವಾರ ಸಂಜೆ ಕರೆಯಲಾಗಿದ್ದ ಸಾಮಾನ್ಯ ಸಭೆಯನ್ನು ಪೌರಾಯುಕ್ತರು ರದ್ದು ಮಾಡಿದರು. ಸದಸ್ಯರಿಗೆ ಏಳು ದಿನ ಮೊದಲೇ ನೋಟಿಸ್ ನೀಡಬೇಕಿದ್ದ ಹಿನ್ನೆಲೆಯಲ್ಲಿ ನಿಯಮಾನುಸಾರ ಸಭೆ ಜರುಗಿಸುವ ಉದ್ದೇಶದಿಂದ ಸಭೆ ರದ್ದು ಮಾಡಲಾಯಿತು.

ನಿಯಮದ ಪ್ರಕಾರ ಒಂದು ವಾರಕ್ಕೂ ಮೊದಲೇ ನೋಟಿಸ್ ನೀಡಬೇಕು. ಸಭೆ ಜರುಗುವುದನ್ನು ವಿರೋಧಿಸಿ ಉಪಾಧ್ಯಕ್ಷರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಸಾಮಾನ್ಯ ಸಭೆ ನಡೆಸುವ ಕುರಿತು ಜಿಲ್ಲಾಧಿಕಾರಿ ಅಭಿಪ್ರಾಯ ಕೇಳಿದ್ದಾರೆ. ನಿಯಮದ ಪ್ರಕಾರ ಸಭೆ ನಡೆಸಲು ಸಾಧ್ಯವಿಲ್ಲ.I ರಮೇಶ ಸುಣಗಾರ, ಪೌರಾಯುಕ್ತ -ಗದಗ ನಗರಸಭೆ ಎಲ್ಲ ಸದಸ್ಯರ ಒಪ್ಪಿಗೆ ಪಡೆದೇ ಟೆಂಡರ್ ಪ್ರಕ್ರಿಯೆ ಜರುಗಿಸಲಾಗಿದೆ. ಟೆಂಡರ್ ಕರೆಯಲು ಅಧ್ಯಕ್ಷರಿಗೆ ಅಧಿಕಾರ ಇರುತ್ತದೆ I ಉಷಾ ಮಹೇಶ ದಾಸರ, ನಗರಸಭೆ ಅಧ್ಯಕ್ಷೆ