ಶ್ರೀಧರ ಅಣಲಗಾರ ಯಲ್ಲಾಪುರ
ತಾಲೂಕಿನ ಇಡಗುಂದಿ ವಲಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಮುಂದಾಗಿದ್ದು, ತನಿಖಾ ನಾಕಾ (ಚೆಕ್ಪೋಸ್ಟ್) ಸಜ್ಜುಗೊಳಿಸಿ, ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಂಡಿದೆ.
ಇಡಗುಂದಿ ವಲಯ ವ್ಯಾಪ್ತಿಯ ಅರಬೈಲ್, ಗುಳ್ಳಾಪುರ, ಕೆಳಾಸೆ ಭಾಗದಲ್ಲಿ ಸ್ಥಳೀಯ ಹಳ್ಳಗಳು ಮತ್ತು ಗಂಗಾವಳಿ ನದಿಯಲ್ಲಿ ವ್ಯಾಪಕವಾಗಿ ಮರಳು ದೊರೆಯುತ್ತದೆ. ಮರಳು ಗಣಿಗಾರಿಕೆಗೆ ಅನುಮತಿ ಇಲ್ಲದ ವೇಳೆಯಲ್ಲೂ ಈ ಭಾಗದಲ್ಲಿ ಅವ್ಯಾಹತವಾಗಿ ಮರಳು ಎತ್ತುವಳಿ, ಸಾಗಾಟ ನಡೆಯುವುದು ಅನೇಕ ವರ್ಷಗಳಿಂದ ರೂಢಿಯಲ್ಲಿದೆ. ಬೇರೆ ಬೇರೆ ಊರಿನವರು ಎಲ್ಲೆಲ್ಲಿಂದಲೋ ಕಾರ್ವಿುಕರನ್ನು ಕರೆತಂದು ಉಸುಕು ಎತ್ತಿ ಲಾರಿ, ಟಿಪ್ಪರ್ಗಳಲ್ಲಿ ಸಾಗಿಸುವುದಿದೆ. ಈ ಬಗ್ಗೆ ಪ್ರಶ್ನಿಸಲು ಹೋದ ಸ್ಥಳೀಯರಿಗೆ, ಸರ್ಕಾರಿ ಕಾಮಗಾರಿಗಾಗಿ ಮರಳು ಒಯ್ಯುತ್ತಿದ್ದು, ಯಾರೂ ಅಡ್ಡಿಪಡಿಸುವಂತಿಲ್ಲ ಎಂದು ಹೇಳುತ್ತಿದ್ದರು. ಅಕ್ರಮ ಸಾಗಾಟವನ್ನು ತಡೆಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದರೂ, ನಾನಾ ಕಾರಣದಿಂದಾಗಿ ಪೂರ್ತಿಯಾಗಿ ಕಡಿವಾಣ ಬಿದ್ದಿರಲಿಲ್ಲ.
ಈ ಬಾರಿ ಕಟ್ಟುನಿಟ್ಟಿನ ಕ್ರಮದೊಂದಿಗೆ ಅಕ್ರಮ ತಡೆಯಲು ಇಲಾಖೆ ಮುಂದಾಗಿದೆ. ಅರಬೈಲ್, ಗುಳ್ಳಾಪುರ ಹಾಗೂ ಕೆಳಾಸೆ ಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುವ ಸ್ಥಳದ ಸಮೀಪ ಅಗಳ (ಕಾಲುವೆ) ನಿರ್ವಿುಸಲಾಗಿದೆ. ಇದರಿಂದಾಗಿ ವಾಹನಗಳು ಮರಳು ರಾಶಿಯ ಸಮೀಪಕ್ಕೆ ಹೋಗಲು ಆಗುತ್ತಿಲ್ಲ. ಇದನ್ನು ಮೀರಿಯೂ ಸಾಗಣೆ ಮಾಡುವುದನ್ನು ತಡೆಯಲು ನಾಕಾ ನಿರ್ವಿುಸಿದ್ದು ಟಿಪ್ಪರ್, ಟೆಂಪೊ, ಲಾರಿಯಂಥ ವಾಹನಗಳನ್ನು ಸಿಬ್ಬಂದಿ ವರ್ಗದವರು ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ.
ಬೆಂಕಿ ತಡೆಗೆ ಕ್ರಮ: ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಗ್ರಾಮೀಣ ಭಾಗದ ಕಾಡುಗಳಿಗೆ ಬೆಂಕಿ ತಗುಲುವ ಸಂಭವ ಹೆಚ್ಚಾಗಿರುತ್ತದೆ. ಅದನ್ನು ತಡೆಯಲು ಇಲಾಖೆ ಸೂಕ್ತ ಉಪಕ್ರಮ ಕೈಗೊಳ್ಳಲು ಮುಂದಾಗಿದೆ. ಬೆಂಕಿ ರೇಖೆ ನಿರ್ವಣ, ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲು ತೀರ್ವನಿಸಿದೆ.
ಅಕ್ರಮ ಮರಳು ಗಣಿಗಾರಿಕೆ ಹಾಗೂ ಸಾಗಾಟ ನಿಯಂತ್ರಿಸಲು ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಇಷ್ಟಾಗಿಯೂ ಅಕ್ರಮಗಳು ನಡೆದದ್ದು ಕಂಡು ಬಂದಲ್ಲಿ ಸಾರ್ವಜನಿಕರು ಇಲಾಖೆಗೆ ಮಾಹಿತಿ ನೀಡಬೇಕು. ಅಕ್ರಮ ತಡೆಗೆ ಇಲಾಖೆಯೊಂದಿಗೆ ಸಹಕರಿಸಬೇಕು. | ಶಿಲ್ಪಾ ನಾಯ್ಕ ವಲಯ ಅರಣ್ಯಾಧಿಕಾರಿ ಇಡಗುಂದಿ