ಜಿಲ್ಲೆ

ತುಂಗಭದ್ರಾ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಚುರುಕು

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ
ತಾಲೂಕಿನ ತುಂಗಭದ್ರಾ ನದಿ ತೀರದ ವಿವಿಧ ಗ್ರಾಮಗಳಲ್ಲಿ ಕೆಲ ದಿನಗಳಿಂದ ಅಕ್ರಮ ಮರಳು ದಂಧೆ ಜೋರಾಗಿದೆ. ಚೌಡಯ್ಯದಾನಪುರ, ಚಿಕ್ಕಕುರುವತ್ತಿ, ಚಂದಾಪುರ, ಹರನಗಿರಿ ಇತರ ಗ್ರಾಮಗಳಲ್ಲಿ ಎತ್ತಿನ ಬಂಡಿ ಮೂಲಕ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದೆ.

ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಣೆ ದಂಧೆ ವ್ಯಾಪಕವಾಗಿದೆ. ಗ್ರಾಮದ ತುಂಗಭದ್ರಾ ನದಿಪಾತ್ರದಲ್ಲಿ ಅಕ್ರಮ ಮರಳನ್ನು ಹಲವಾರು ಎತ್ತಿನ ಬಂಡಿಗಳಲ್ಲಿ ತುಂಬಿಕೊಂಡು, ಚೌಡಯ್ಯ ದಾನಪುರ ಮಾರ್ಗವಾಗಿ ಹಾವೇರಿ ತಾಲೂಕಿನ ನರಸೀಪುರ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯ ಬಳಿ ಸಂಗ್ರಹಿಸಲಾಗುತ್ತಿದೆ. ಅಲ್ಲಿ ಟಿಪ್ಪರ್ ಹಾಗೂ ಲಾರಿಗೆ ತುಂಬಿ ಸಾಗಿಸಲಾಗುತ್ತಿದೆ.

ಮಳೆ ಇಲ್ಲದ ಕಾರಣ ತುಂಗಭದ್ರಾ ನದಿ ಪಾತ್ರದಲ್ಲಿ ಕಳೆದ 15 ದಿನದಿಂದ ನೀರಿನ ಹರಿವು ಕಡಿಮೆಯಾಗಿದೆ. ಆದ್ದರಿಂದ ಒಂದು ವಾರದಿಂದ ದಂಧೆಕೋರರು ನಿರಂತರವಾಗಿ ಮರಳು ಸಾಗಿಸುತ್ತಿದ್ದಾರೆ. ಇದನ್ನು ಮಟ್ಟಹಾಕಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೊಲೀಸರು, ತಹಸೀಲ್ದಾರರು ಮೌನವಾಗಿರುವುದು ದಂಧೆಕೋರರಿಗೆ ಇನ್ನಷ್ಟು ಬಲ ನೀಡಿದಂತಾಗಿದೆ. ಗುತ್ತಲ ಭಾಗದಿಂದ ಲಾರಿ-ಟಿಪ್ಪರ್‌ಗಳು ನರಸೀಪುರ ಬಳಿ ಬಂದು ಮರಳು ತುಂಬಿಕೊಂಡು ಹೋಗು ತ್ತಿರುವುದು ಸಾಮಾನ್ಯವಾಗಿದೆ. ಆದರೆ, ನಿತ್ಯವೂ ಈ ದಂಧೆ ಇಲ್ಲಿ ನಡೆಯುತ್ತಿದ್ದರೂ ಗುತ್ತಲ ಹಾಗೂ ರಾಣೆಬೆನ್ನೂರ ಗ್ರಾಮೀಣ ಠಾಣೆ ಪೊಲೀಸರ ಗಮನಕ್ಕೆ ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ.

ಶಾಲಾ ಮಕ್ಕಳಿಗೂ ತೊಂದರೆ

ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ರಸ್ತೆಯ ಬಳಿ ಮಕ್ಕಳು ಎತ್ತಿನ ಬಂಡಿಗಳನ್ನು ತಪ್ಪಿಸಿ ಶಾಲೆಗೆ ಬರುವುದೇ ಕಷ್ಟವಾಗಿದೆ. ಅಲ್ಲದೆ ಕೆಲವರು ಟ್ರ್ಯಾಕ್ಟರ್‌ಗಳಿಂದಲೂ ಮರಳು ಸಾಗಿಸುವುದರಿಂದ ಅವುಗಳ ಶಬಟಛಿದಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಅಕ್ರಮ ಮರಳುಗಾರಿಕೆ ತಡೆಯುವ ನಿಟ್ಟಿನಲ್ಲಿ ರಚಿತವಾಗಿರುವ ಕಾರ್ಯಪಡೆ (ಟಾಸ್ಕ್‌ಫೋರ್ಸ್) ಸಭೆ ಕರೆದಿದ್ದೇವೆ. ಸಂಬಂಧಿಸಿದ ಎಲ್ಲರಿಗೂ ಏನೇನು ಜವಾಬ್ದಾರಿ ನೀಡಬೇಕು ಎಂಬುದನ್ನು ಸಭೆಯಲ್ಲಿ ಚರ್ಚಿಸಿ ನಿರ್ಣಯಿಸಲಾಗುವುದು. ಸಭೆ ಬಳಿಕ ಕಾರ್ಯಾಚರಣೆ ನಡೆಸಲಾಗುವುದು.I ಎಚ್.ಎನ್. ಶಿರಹಟ್ಟಿ, ತಹಸೀಲ್ದಾರ್ ರಾಣೆಬೆನ್ನೂರ ತುಂಗಭದ್ರಾ ನದಿಯ ಒಡಲನ್ನು ಬಗೆದು ಅಕ್ರಮ ಮರಳು ದಂಧೆ ನಡೆಸುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಭಾರಿ ಹಾನಿ ಮಾಡಲಾಗುತ್ತಿದೆ. ಅಧಿಕಾರಿಗಳು ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವುದರ ಜತೆಗೆ ದಂಧೆಕೋರರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.Iಮಹೇಶ, ಚೌಡಯ್ಯದಾನಪುರ ನಿವಾಸಿ