ಕುಂದಾಪುರ: ಮರಳು ದಿಬ್ಬ ತೆರವು, ಸಾಗಾಟ, ಹೊರಜಿಲ್ಲೆ ಕಾರ್ಮಿಕರ ಹೇಷಾರವ, ಎಲ್ಲೆಲ್ಲಿಂದಲೋ ಬಂದು ರಸ್ತೆ ಬದಿ ನಿಲ್ಲುವ ವಾಹನ ಚಾಲಕರ ಪಿಕ್‌ನಿಕ್... ಕರೊನಾ ಸಂಕಷ್ಟದಲ್ಲೂ ಜನರ ನೆಮ್ಮದಿ ಕೆಡಿಸುತ್ತಿದೆ.
ಮರಳು ಕಾರ್ಮಿಕರ ಸದ್ದುಗದ್ದಲ, ಭಾರಿ ವಾಹನಗಳ ಓಡಾಟಕ್ಕೆ ಜನ ಬೆಚ್ಚಿದರೆ, ರಸ್ತೆ ಕಂಬಳ ಗದ್ದೆಯಂತಾಗಿದೆ. ದೊಡ್ಡ ವಾಹನಗಳ ಸಂಚಾರಕ್ಕೆ ರಸ್ತೆ ಬದಿಗಳಲ್ಲಿರುವ ಮನೆಗಳಿಗೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಲಾರಿ ಓಡಾಟದ ವೇಗಕ್ಕೆ ರಸ್ತೆ ಬದಿ ಮನೆಯವರು ತಮ್ಮ ವಾಹನ ಬಿಟ್ಟು ಪಾದಯಾತ್ರೆ ಮಾಡಬೇಕಿದೆ.
ಮರಳುಗಾರಿಕೆಯಿಂದ ತಮಗಾದ ಸಮಸ್ಯೆ ಬಗ್ಗೆ ಜನ ದೂರು ನೀಡಿದರೆ ಸ್ಪಂದನೆಯಿಲ್ಲ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಮನಕ್ಕೆ ತಂದರೆ, ಅವರೇ ಮರಳುಗಾರಿಕೆ ನಡೆಸುವವರಿಗೆ ಮಾಹಿತಿ ನೀಡುತ್ತಾರೆ. ಸೇತುವೆ, ಜನವಸತಿ ಪ್ರದೇಶದಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲದಿದ್ದರೂ ಒಂದೇ ಕಡೆ ಏಳು ಜನರಿಗೆ ಮರಳು ಡಂಪ್ ಮತ್ತು ಸಾಗಾಟಕ್ಕೆ ಅವಕಾಶ ನೀಡಲಾಗಿದೆ. ಬಂದರು ಇಲಾಖೆ ಸ್ಥಳ ಮರಳು ಡಂಪಿಂಗ್ ಯಾರ್ಡ್ ಆಗಿದೆ. ಮರಳು ತೆಗೆಯುವ ಜಾಗದ ಆರ್‌ಟಿಸಿ, ದೋಣಿಗಳ ಜಿಪಿಎಸ್ ಮಾಡಿ, ಸಲ್ಲಿಸಿದ ನಂತರ ಪರವಾನಗಿ ನೀಡಲಾಗುತ್ತಾದರೂ ಲೋಕೋಪಯೋಗಿ ರಸ್ತೆ, ಬಂದರು ಇಲಾಖೆ ಜಾಗದಲ್ಲಿ ಮರಳು ಸಂಗ್ರಹಕ್ಕೆ ಪರವಾನಗಿ ಕೊಟ್ಟಿರುವುದು ಹೇಗೆ ಎನ್ನುವುದು ಪ್ರಶ್ನೆ.
ಜಿಲ್ಲೆಯ 157 ಕಡೆ ಸಿಆರ್‌ಜಡ್ ವ್ಯಾಪ್ತಿಯಲ್ಲಿ ಮರಳು ತೆಗೆಯುವುದಕ್ಕೆ ಪರವಾನಗಿ ನೀಡಲಾಗಿದೆ. ಗುರುತಿಸಿದ ಮರಳು ದಿಬ್ಬದಲ್ಲೇ ಮರಳು ತೆಗೆದು ಡಂಪ್ ಮಾಡಿ ನಂತರ ಸಾಗಿಸಬೇಕು. ಮರಳು ತೆಗೆಯುವ ದೋಣಿಗೂ ಜಿಪಿಎಸ್ ಕಡ್ಡಾಯ. ಜಿಪಿಎಸ್ ಅಳವಡಿಸಿದ ದೋಣಿ ಗುರುತಿಸಿದ ಮರಳು ದಿಬ್ಬದಲ್ಲಿ ಮರಳು ತೆಗೆದರೆ, ಜಿಪಿಎಸ್ ಅಳವಡಿಸದವರು ದಿಬ್ಬದ ಹೊರಬದಿಯಿಂದ ಮರಳು ತೆಗೆಯುತ್ತಾರೆ. ಸೇತುವೆ, ದೇವಸ್ಥಾನ, ಜನವಸತಿ, ಅಮೂಲ್ಯ ಕಟ್ಟಡಗಳು ಇರುವ ಸ್ಥಳದಿಂದ 250 ಮೀಟರ್ ಅಂತರದಲ್ಲಿ ದಿಬ್ಬ ಗುರುತಿಸಿ ತೆರವಿಗೆ ಅನುಮತಿ ನೀಡಲಾಗಿದೆ. ಆದರೂ ಬಂಟ್ವಾಡಿ ಸೇತುವೆ ಬಳಿಯೇ ಮರಳು ತೆಗೆಯಲಾಗುತ್ತಿದೆ. ಕನ್ನಡಕುದ್ರು, ಕುಂಬಾರಮಕ್ಕಿ ಮುಂತಾದ ಕಡೆ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಜಿಪಿಎಸ್ ಪರೀಕ್ಷಿಸಿ ಬಿಡುವ ಮೂಲಕ ಜಿಲ್ಲಾಡಳಿತವೇ ಮರಳು ಸಾಗಾಟದಲ್ಲಿ ಮೋಸವಿದೆ ಎಂದು ಒಪ್ಪಿಕೊಂಡಂತಾಗಿದೆ.
ಜಿಪಿಎಸ್ ಸಾಧನ ತೆಂಗಿನಮರದಲ್ಲಿ!: ಮೊವಾಡಿಯಲ್ಲಿ ಜಿಪಿಎಸ್ ಸಾಧನವನ್ನು ತೆಂಗಿನಮರಕ್ಕೆ ತೂಗು ಹಾಕಿ ಮರಳು ಸಾಗಿಸುತ್ತಿದ್ದಾರೆ. ಜಿಪಿಎಸ್ ಅಳವಡಿಸಿದ ಲಾರಿಯ ಸಾಧನ ತೆಂಗಿನಮರದಲ್ಲಿ ತೂಗು ಹಾಕಿದ್ದರಿಂದ ಲಾರಿ ಒಂದೇ ಕಡೆ ನಿಂತಂತೆ ಮಾಹಿತಿ ರವಾನೆಯಾಗುತ್ತದೆ. ಆದರೆ ಜಿಪಿಎಸ್ ತೆಗೆದಿಟ್ಟ ಲಾರಿ ಮರಳು ಸಾಗಾಟ ಬಿಟ್ಟಿರಲಿಲ್ಲ. ಕೊನೆಗೂ ಸಿಕ್ಕಿಬಿದ್ದು, ತಪ್ಪಿತಸ್ಥ ಲಾರಿ ಮಾಲೀಕರಿಗೆ ದಂಡ ಹಾಕಲಾಗಿದೆ.
ಮರಳು ಗಣಿ ನಿಂತಿದ್ದು ಎಂದು?: ಮೋವಾಡಿ, ಬಡಾಕೆರೆ, ಗಂಗೊಳ್ಳಿ, ತೊಪ್ಲು, ಚುಂಗಿಗುಡ್ಡೆ, ಜೋಯಿಸರ ಬೆಟ್ಟು ಪ್ರದೇಶದಲ್ಲಿ ನಿರಂತರ ಮರಳು ಗಣಿ ನಡೆಯುತ್ತಿದೆ. ಅಕ್ರಮ ಸಾಗಾಟ ನಿಲ್ಲಿಸಲಾಗಿದ್ದರೂ ಜನಪ್ರತಿನಿಧಿಯೊಬ್ಬರ ಬೆದರಿಕೆಗೆ ಬೆಚ್ಚಿದ ಅಧಿಕಾರಿಗಳು ಒಂದು ದಿನದ ಮಟ್ಟಿಗೆ ನಿಲ್ಲಿಸಿದ್ದರು! ಒಂದು ಪರ್ಮಿಟ್‌ಗೆ ಎರಡು ದೋಣಿ, ದೋಣಿಗೆ ಆರು ಕಾರ್ಮಿಕರು. ಮರಳು ಕಾರ್ಮಿಕರು ಹೊರ ರಾಜ್ಯದವರಾಗಿದ್ದು, 1884 ಜನ ಹೊರರಾಜ್ಯದ ಕಾರ್ಮಿಕರಿದ್ದಾರೆ ಎಂದು ಅಂದಾಜಿಸಲಾಗಿದೆ.
ಹೊರಗಡೆಯಿಂದ ಬಂದ ಕಾರ್ಮಿಕರ ಕರೊನಾ ಟೆಸ್ಟ್, ವ್ಯಾಕ್ಸಿನ್, ಪರೀಕ್ಷೆ ಬಗ್ಗೆ ಮಾಹಿತಿ ಇಲ್ಲ. ಜಿಪಿಎಸ್ ಆಫ್ ಮಾಡಿದರೆ, ಜಿಪಿಎಸ್ ಅಳವಡಿಸದಿದ್ದರೆ ಮಾನಿಟರ್ ಆಗೋದಿಲ್ಲ. ಬಂಟ್ವಾಡಿಯಲ್ಲಿ ಇರುವ ಸಮಸ್ಯೆ ಪರಿಶೀಲಿಸಿ, ವರದಿ ಮಾಡಿ ಸೆ.25ರಂದು ಸಭೆ ಮುಂದೆ ಇಡುತ್ತೇನೆ. ಏನು ಮಾಡಬೇಕು ಎನ್ನುವುದನ್ನು ಅಧಿಕಾರಿಗಳು ನಿರ್ಧರಿಸುತ್ತಾರೆ. | ಸಂಧ್ಯಾ ಕುಮಾರ್, ಭೂ ವಿಜ್ಞಾನಿ, ಬೈಂದೂರು