ಹರೇಕಳ ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ಸಭಾಂಗಣದಲ್ಲಿ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಶುಕ್ರವಾರ ನಡೆಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ, ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ಲಾಯ್ಡ ರೋಡ್ರಿಗಸ್ ಮೊದಲಾದವರಿದ್ದರು. 
ಜಿಲ್ಲೆ

ಅಕ್ರಮ ಮರಳುಗಾರಿಕೆ, ಅಂಚೆ ಇಲಾಖೆ ನಿರ್ಲಕ್ಷ್ಯ ಚರ್ಚೆಗೆ ಗ್ರಾಸ: ಹರೇಕಳ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಆಕ್ರೋಶ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಹರೇಕಳ ಗ್ರಾಮ ಪಂಚಾಯಿತಿಯ 2024-25ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಶುಕ್ರವಾರ ನಡೆದಿದ್ದು, ಅಕ್ರಮ ಮರಳುಗಾರಿಕೆ, ಅಂಚೆ ಇಲಾಖೆ, ನೋಡೆಲ್ ಅಧಿಕಾರಿ ವಿರುದ್ಧ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ಹರೇಕಳದಲ್ಲಿ ರಾತ್ರಿ ವೇಳೆ ಅಕ್ರಮ ಮರಳುಗಾರಿಕೆ ಆರಂಭಗೊಂಡಿದ್ದು, ಟಿಪ್ಪರ್‌ಗಳು ಬೇಕಾಬಿಟ್ಟಿ ಚಲಾಯಿಸುತ್ತಿವೆ. ಯಾವುದೇ ಟಿಪ್ಪರ್‌ಗೂ ನಂಬರ್ ಪ್ಲೇಟ್ ಇಲ್ಲ. ಒಂದು ವೇಳೆ ಪರವಾನಗಿ ಕೊಡಲಾಗಿದ್ದರೆ ಹಗಲು ಮರಳುಗಾರಿಕೆಯ ಪರವಾನಗಿ ಕೊಡಿ. ಅಪಘಾತವಾದರೆ ವಿಮೆಯೂ ಸಿಗುವುದಿಲ್ಲ, ಅಪಘಾತ ಮಾಡಿದ ವಾಹನಗಳ ಬಗ್ಗೆಯೂ ಗೊತ್ತಾಗುವುದಿಲ್ಲ. ಕೊಣಾಜೆ ಠಾಣೆಗೆ ಕರೆ ಮಾಡಿದರೆ ತಕ್ಷಣವೇ ಆರೋಪಿಗಳಿಗೆ ಮಾಹಿತಿ ತಲುಪುತ್ತದೆ ಎಂದು ಸಿಪಿಐಎಂ ಮುಖಂಡ ರಫೀಕ್ ಹರೇಕಳ ಆತಂಕ ವ್ಯಕ್ತಪಡಿಸಿದರು.

ನನಗಿಂತ ಮೇಲಿನ ಅಧಿಕಾರಿಗಳು ಇದ್ದಾರೆ. ಅವರಲ್ಲಿ ಮಾತನಾಡಿ, ಎಲ್ಲವನ್ನು ಇಲ್ಲಿ ಚರ್ಚಿಸಲು ಸಾಧ್ಯವಿಲ್ಲ ಎಂದು ಎಎಸ್‌ಐ ತಿಳಿಸಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಅಂಚೆ ಇಲಾಖೆ ವಿರುದ್ಧ ಸಿಡಿಮಿಡಿ

ಗ್ರಾಮದಲ್ಲಿರುವ ಅಂಚೆ ಸಿಬ್ಬಂದಿ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ. ಪಾಸ್‌ಪೋರ್ಟ್ ಸಹಿತ ಅಮೂಲ್ಯ ದಾಖಲೆಗಳು ತಲುಪಬೇಕಾದವರಿಗೆ ತಲುಪುತ್ತಿಲ್ಲ. ಇಂಥ ಬೇಜವಾಬ್ದಾರಿಯ ಇಲಾಖೆಯ ಅಗತ್ಯವಿಲ್ಲ, ಮುಚ್ಚಿಬಿಡಿ. ಮಾಹಿತಿಯೇ ತಿಳಿಯದಿರುವ ಅಧಿಕಾರಿ ಗ್ರಾಮಸಭೆಗೆ ಬರುವ ಅಗತ್ಯವಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಜಮೀನು ಒತ್ತುವರಿ

ನಿವೇಶನರಹಿತರಿಗೆ ಮೀಸಲಿಟ್ಟ ಜಮೀನು ಖಾಸಗಿಯವರು ಒತ್ತುವರಿ ಮಾಡಿರುವ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದರು. ಎರಡು ಎಕರೆ ಜಾಗ ಒತ್ತುವರಿಯಾಗಿದ್ದು, ಗಡಿ ಗುರುತು ಮಾಡಿ ಒತ್ತುವರಿ ತೆರವು ಮಾಡುತ್ತೇವೆ. ಪಂಚಾಯಿತಿ ಜಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಉಪಾಧ್ಯಕ್ಷ ಮಜೀದ್ ಉತ್ತರಿಸಿದರು.

ಸರ್ವೇಯರ್ ಬಂದು ಅಳತೆ ಮಾಡಿ ಕಲ್ಲು ಹಾಕಿದ್ದು, ಜಿಲ್ಲಾಧಿಕಾರಿಗೆ ವರದಿ ಕಳಿಸಿದ್ದೇವೆ. ಸರ್ಕಾರದ ಮಾನದಂಡ ಆಧರಿಸಿ ಅರ್ಹ ಫಲಾನುವಭವಿಗಳಿಗೆ ಜಮೀನು ಹಂಚಲಾಗುವುದು ಎಂದು ಪಿಡಿಒ ಮುತ್ತಪ್ಪ ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಪಿ.ಅಬ್ದುಲ್ ಮಜೀದ್, ಜಿ.ಪಂ. ಇಂಜಿನಿಯರಿಂಗ್ ಇಲಾಖೆಯ ಲಾಯ್ಡ ರೋಡ್ರಿಗಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಲಿನಿ, ಕೊಣಾಜೆ ಠಾಣಾ ಎಎಸ್‌ಐ ಜಗನ್ನಾಥ ಶೆಟ್ಟಿ, ಅಂಚೆ ಇಲಾಖೆಯ ಧನಂಜಯ, ನರೇಗಾದ ಭವ್ಯಾ, ಕಂದಾಯ ಇಲಾಖೆ ಅಕ್ಷತಾ, ಮೆಸ್ಕಾಂನಿಂದ ಪವನ್ ಕುಮಾರ್, ಆರೋಗ್ಯ ಇಲಾಖ ಸ್ನೇಹಲತಾ ಉಪಸ್ಥಿತರಿದ್ದರು.

ಪಿಡಿಒ ಮುತ್ತಪ್ಪ ಡಿ. ಸ್ವಾಗತಿಸಿದರು. ಕಾರ್ಯದರ್ಶಿ ತಾರಾಕ್ಷಿ ವರದಿ ಮತ್ತು ಲೆಕ್ಕಪತ್ರ ವಾಚಿಸಿದರು.

ನೋಡೆಲ್ ಅಧಿಕಾರಿಗೆ ತರಾಟೆ!

ಗ್ರಾಮಸಭೆಯ ದಿನಾಂಕ ತಾಲೂಕು ಪಂಚಾಯಿತಿ ಅಧಿಕಾರಿಗಳು ನಿರ್ಧಾರ ಮಾಡಿ ನೋಡೆಲ್ ಅಧಿಕಾರಿಯನ್ನು ನೇಮಿಸುತ್ತಾರೆ. ಅದರಂತೆ ಹರೇಕಳ ಗ್ರಾಮ ಸಭೆ ಶುಕ್ರವಾರ ಮಧ್ಯಾಹ್ನ 2:30ಕ್ಕೆ ನಿಗದಿಪಡಿಸಿ ಶಿಕ್ಷಣಾಧಿಕಾರಿಯನ್ನು ನೇಮಿಸಲಾಗಿತ್ತು. ಆದರೆ ಗ್ರಾಮಸಭೆ ಆರಂಭಗೊಂಡರೂ ನೋಡೆಲ್ ಅಧಿಕಾರಿ ಬಾರದ ಕಾರಣ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ತಾನು ಬರುತ್ತಿರುವುದಾಗಿ ಕರೆ ಮಾಡಿದ್ದರಿಂದ ಗ್ರಾಮಸ್ಥರು ಕಾದರು. 3:15ಕ್ಕೆ ನೋಡೆಲ್ ಅಧಿಕಾರಿ ವಿಶ್ವನಾಥ ಅವರು ಆಗಮಿಸಿದಾಗ ರಫೀಕ್ ಹರೇಕಳ, ಉಮರಬ್ಬ ಸಹಿತ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎರಡೇ ಗಂಟೆಯಲ್ಲಿ ಮುಕ್ತಾಯ

ಹಿಂದೆ ವಿವಿಧ ವಿಚಾರಗಳ ಅದರಲ್ಲೂ ನಿವೇಶನ, ಸರ್ಕಾರಿ ಬಸ್ ವ್ಯವಸ್ಥೆ ವಿಚಾರದಲ್ಲಿ ಚರ್ಚೆ ನಡೆದು ಗ್ರಾಮಸಭೆ ಸುದೀರ್ಘ ಅವಧಿ ತೆಗೆದುಕೊಳ್ಳುತ್ತಿತ್ತು. ಕೆಲವು ಬಾರಿ ಗ್ರಾಮಸಭೆ ರದ್ದಾಗಿದ್ದೂ ಇದೆ. ಆದರೆ ಈ ಬಾರಿ ಹಲವು ಸಮಸ್ಯೆ ಬಗೆಹರಿದಿದ್ದು, ನಿವೇಶನ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸಭೆಯಲ್ಲಿ ಹೆಚ್ಚು ಚರ್ಚೆ ಇಲ್ಲದ ಕಾರಣ 3:20ಕ್ಕೆ ಆರಂಭಗೊಂಡ ಗ್ರಾಮಸಭೆ 5:10ಕ್ಕೆ ಮುಕ್ತಾಯವಾಯಿತು.