ಪರಶುರಾಮಪುರ; ಅಕ್ರಮ ಮದ್ಯ ಮಾರಾಟ ಅಪರಾಧವಾಗಿದ್ದು, ಉಲ್ಲಂಘಿಸಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಚಳ್ಳಕೆರೆ ವಲಯದ ಅಬಕಾರಿ ನಿರೀಕ್ಷಕ ಸಿ.ನಾಗರಾಜು ಎಚ್ಚರಿಸಿದರು.
ಸಮೀಪದ ದೇವರಮರಿಕುಂಟೆ ಗ್ರಾಮದ ಅಂಗಡಿ-ಮುಂಗಟ್ಟುಗಳಿಗೆ ಭಾನುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಮಾತನಾಡಿದರು.
ಬಹಳಷ್ಟು ಹಳ್ಳಿಗಳಲ್ಲಿ ಗೂಡಂಗಡಿ, ಹೋಟೆಲ್, ರಸ್ತೆ ಬದಿ ಡಾಬಾ ಸೇರಿ ವಿವಿಧೆಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಲೇ ಇವೆ. ಆರಂಭದಲ್ಲಿ ದಂಡ ವಿಧಿಸಿ, ಬೀಗಮುದ್ರೆ ಹಾಕಲಾಗುತ್ತಿತ್ತು. ಆದರೆ, ಇನ್ಮುಂದೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಹಳ್ಳಿಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ವ್ಯಾಪಾರಸ್ಥರು ಕಾನೂನು ಪಾಲಿಸಬೇಕು. ಸ್ವಚ್ಛತೆ, ಗುಣಮಟ್ಟದ ಆಹಾರದ ಜತೆ ಅಕ್ರಮ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವುದನ್ನು ಸಂಪೂರ್ಣ ಕಡಿವಾಣ ಹಾಕಬೇಕು ಎಂದರು.
ಉಪ ನಿರೀಕ್ಷಕರಾದ ಡಿ.ಟಿ.ತಿಪ್ಪಯ್ಯ, ಟಿ.ರಂಗಸ್ವಾಮಿ, ಪೇದೆಗಳಾದ ಟಿ.ಸೋಮಶೇಖರ, ನಾಗರಾಜು ಇದ್ದರು.
ದಂಡದ ಜತೆಗೆ ಶಿಕ್ಷೆ: ಇನ್ಮುಂದೆ ಹಳ್ಳಿಗಾಡಿನ ಪ್ರದೇಶದ ಅಂಗಡಿ ಮುಂಗಟ್ಟುಗಳ ಮೇಲೆ ಪದೇ ಪದೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುವುದು. ಅಕ್ರಮ ಮದ್ಯ ಮಾರಾಟ ಕಂಡುಬಂದರೆ ಅಂಗಡಿ ಪರವಾನಗಿ ರದ್ದು, ದಂಡದ ಜತೆಗೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು.-ಸಿ.ನಾಗರಾಜು, ಅಬಕಾರಿ ನಿರೀಕ್ಷಕ, ಚಳ್ಳಕೆರೆ
ಜಿಲ್ಲಾಡಳಿತಕ್ಕೆ ಮನವಿ: ಎಲ್ಲ ಹಳ್ಳಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ. ಪರಿಣಾಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಜನರು ಮದ್ಯ ಸೇವನೆಗೆ ವೆಚ್ಚ ಮಾಡುತ್ತಿದ್ದಾರೆ. ಜತೆಗೆ ಗಲಾಟೆಗಳು ಹೆಚ್ಚಾಗಿವೆ. ನೆಮ್ಮದಿ ಕಣ್ಮರೆ ಆಗುತ್ತಿದೆ. ಗ್ರಾಮೀಣ ಜನರ ಒಳಿತಿಗೆ ಅಬಕಾರಿ, ಪೊಲೀಸ್ ಇಲಾಖೆ ಕಠಿಣ ಕ್ರಮಕೈಗೊಳ್ಳಬೇಕು. ಕಡಿವಾಣ ಹಾಕದಿದ್ದರೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುವುದು.- ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ, ಅಧ್ಯಕ್ಷ, ಜಿಲ್ಲಾ ನವ ಜಾಗೃತಿ ಯುವ ವೇದಿಕೆ