ಜಿಲ್ಲೆ

ಅಕ್ರಮವಾಗಿ ಗೋವಾ ಮದ್ಯ ಮಾರಾಟ: ಆರೋಪಿ ಬಂಧನ, 195 ಲಿ. ಮದ್ಯ ವಶ

ಹಾನಗಲ್ಲ: ಅಕ್ರಮವಾಗಿ ಗೋವಾ ಮದ್ಯವನ್ನು ತಂದು ಮನೆಯಲ್ಲಿಟ್ಟುಕೊಂಡು ಜನರಿಗೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪಟ್ಟಣದ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.

ತಾಲೂಕಿನ ಬ್ಯಾತನಾಳ ಗ್ರಾಮದ ಭೀಮಪ್ಪ ದೇವೇಂದ್ರಪ್ಪ ತಹಶೀಲ್ದಾರ ಬಂಧಿತ. ಈತ ಗೋವಾದಿಂದ ಅಕ್ರಮವಾಗಿ 1 ಲಕ್ಷ ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ತಂದು ಮನೆಯಲ್ಲಿಟ್ಟುಕೊಂಡಿದ್ದ. ಯಾವುದೇ ಪರವಾನಗಿ ಇಲ್ಲದೇ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಆಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಆರೋಪಿ ಭೀಮಪ್ಪನ ಮನೆ ಮೇಲೆ ದಾಳಿ ಮಾಡಿರುವ ಪೊಲೀಸರು, ಆತನಿಂದ 96,195 ರೂ. ಮೌಲ್ಯದ ವಿವಿಧ ಬಗೆಯ 195 ಲೀ. ಮದ್ಯದ 286 ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ ಮಾಡಿಕೊಂಡು ಅಕ್ರಮವಾಗಿ ಮನೆಯಲ್ಲಿಯೇ ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ.

ಜಿಲ್ಲಾ ಪೊಲೀಸ್ ವರಿಷ್ಠ ಅಂಶುಕುಮಾರ, ಹೆಚ್ಚುವರಿ ಎಸ್​ಪಿ ಎಲ್.ವೈ. ಶಿರಕೋಳ, ಶಿಗ್ಗಾಂವಿ ಡಿಎಸ್​ಪಿ ಕೆ.ವಿ. ಗುರುಶಾಂತಪ್ಪ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಎನ್.ಎಚ್. ಆಂಜನೇಯ, ಸಿಬ್ಬಂದಿ ಶಂಭು ಸುಳ್ಳಳ್ಳಿ, ಈರಣ್ಣ ಲಂಗೋಟಿ, ಪಿ.ಬಿ. ಹೊಸಮನಿ, ಆನಂದ ಪಾಟೀಲ ದಾಳಿಯಲ್ಲಿ ಪಾಲ್ಗೊಂಡಿದ್ದರು.