ರಾಯಚೂರು: ನಗರದ ಎಪಿಎಂಸಿಯಲ್ಲಿ ರೈತರ ಉತ್ಪನ್ನಗಳ ದಾಸ್ತಾನಿಗಾಗಿ ನಿರ್ಮಾಣ ಮಾಡಲಾಗಿದ್ದ ನಾಲ್ಕು ಗೋದಾಮುಗಳನ್ನು ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ಮಾರಾಟ ಮಾಡಿದೆ. ಕೂಡಲೇ ಆಡಳಿತ ಮಂಡಳಿ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಒತ್ತಾಯಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಎಪಿಎಂಸಿ ಅಧ್ಯಕ್ಷರು, ನಿರ್ದೇಶಕರು ಮತ್ತು ಅಕಾರಿಗಳು ಇದರಲ್ಲಿ ಶಾಮೀಲಾಗಿದ್ದು, ಕಡಿಮೆ ಬೆಲೆಗೆ ಗೋದಾಮು, ನಿವೇಶನ ಮಾರಾಟ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟವುಂಟು ಮಾಡಿದ್ದಾರೆ ಎಂದರು.
ರೈತರು ಎಪಿಎಂಸಿಗೆ ಮಾರಾಟಕ್ಕೆ ಬರುವ ಉತ್ಪನ್ನಗಳು ಟೆಂಡರ್ ಆಗದೇ ಹೋದಲ್ಲಿ ಸಂಗ್ರಹಿಸಲು ನಾಲ್ಕು ಗೋದಾಮುಗಳನ್ನು ನಿರ್ಮಿಸಲಾಗಿದೆ. ಐದು ಕೋಟಿ ರೂ. ಮೌಲ್ಯದ ಗೋದಾಮುಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡಿ ಅವ್ಯವಹಾರ ಎಸಗಲಾಗಿದೆ.
2022ರಲ್ಲಿ ಶೈಲೇಶ್ವರ ಕಾಟನ್ ಟ್ರೇಡರ್ಸ್, ರೇಣುಕಾ ಟ್ರೇಡರ್ಸ್, ಶ್ರೀನಾಥ ಇಂಡಸ್ಟ್ರೀಸ್, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ಗೆ 30 ರಿಂದ 50 ಲಕ್ಷ ರೂ.ವರೆಗೆ ಒಂದೊಂದು ಗೋದಾಮನ್ನು ಲೀಸ್ ಕಂ ಸೇಲ್‌ಗೆ ನೀಡಲಾಗಿದೆ. ಆದರೆ ಎಪಿಎಂಸಿ ಕಾಯ್ದೆಯಲ್ಲಿ ಆಸ್ತಿಯನ್ನು ವಾಣಿಜ್ಯ ಉದ್ಧೇಶಕ್ಕೆ ಮಾರಾಟ ಮಾಡಲು ಅವಕಾಶವಿಲ್ಲ.
ಅಚ್ಯುತರೆಡ್ಡಿ ಅಧ್ಯಕ್ಷರಿದ್ದಾಗ ಗೋದಾಮುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಬಾರದು ಸೇರಿದಂತೆ 17 ಷರತ್ತುಗಳನ್ನು ವಿಸಿ ಗೋದಾಮು ಮಾರಾಟ ಮಾಡಲಾಗಿದೆ. ಆದರೆ ಗೋದಾಮುಗಳನ್ನು ವಾಣಿಜ್ಯ ಉದ್ಧೇಶಕ್ಕೆ ಬಳಕೆ ಮಾಡಲಾಗುತ್ತಿದ್ದು, ಕೂಡಲೇ ತೆರವುಗೊಳಿಸಿ ರೈತರ ಉತ್ಪನ್ನ ದಾಸ್ತಾನು ಮಾಡಲು ಅವಕಾಶ ನೀಡಬೇಕು.
ಜತೆಗೆ ಎಪಿಎಂಸಿಯಿಂದ ಪೇಟೆ ಕಾರ್ಯಕರ್ತರಿಗೆ 88 ನಿವೇಶನಗಳನ್ನು ನೀಡಲಾಗಿದೆ. ಅರ್ಜಿ ಆಹ್ವಾನದಲ್ಲಿ ಪ್ರತಿ ಚದುರ ಅಡಿಗೆ 80 ರೂ. ನಿಗದಿಗೊಳಿಸಲಾಗಿದ್ದರೂ. ಅದನ್ನು ಚದುರ ಅಡಿಗೆ 40 ರೂ.ನಂತೆ ಮಾರಾಟ ಮಾಡಿ ಅವ್ಯವಹಾರ ನಡೆಸಲಾಗಿದ್ದು, ಇದರಿಂದ ಎಪಿಎಂಸಿಗೆ 21.30 ಕೋಟಿ ರೂ. ನಷ್ಟವುಂಟಾಗಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎಂ.ವಿರುಪಾಕ್ಷಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪದಾಕಾರಿಗಳಾದ ಎನ್.ಶಿವಶಂಕರ, ಸಣ್ಣ ನರಸಿಂಹ ನಾಯಕ, ನರಸಪ್ಪ ಆಶಾಪುರ, ಹಂಪಯ್ಯ, ನಾಗರಾಜ ಗೌಡ, ಅಶೋಕರೆಡ್ಡಿ ಉಪಸ್ಥಿತರಿದ್ದರು.