ಜಿಲ್ಲೆ

ಅಕ್ರಮ ಕ್ವಾರಿಗೆ ಲಗಾಮಿಲ್ಲ : ಪುತ್ತಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ : ಮಾಫಿಯಾದಲ್ಲಿ ಅಧಿಕಾರಿಗಳು ಶಾಮೀಲಾದ ಆರೋಪ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಂಪುಕಲ್ಲಿನ ಅಕ್ರಮ ಕ್ವಾರಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಸರ್ಕಾರದ ಬೊಕ್ಕಸಕ್ಕೂ ನಷ್ಟವಾಗುತ್ತಿದೆ. ಅಧಿಕಾರಿಗಳಿಗೆ ಅಕ್ರಮಗಳ ಬಗ್ಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಮಾಫಿಯಾದಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಪುತ್ತಿಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ದಯಾನಂದ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ 2025-26ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಅಕ್ರಮ ಕ್ವಾರಿ, ಅಂಗನವಾಡಿ ಕೇಂದ್ರ ಸಹಿತ ವಿವಿಧ ಸಮಸ್ಯೆಗಳ ಕುರಿತು ಅಧಿಕಾರಿಗಳ ಜತೆ ಚರ್ಚಿಸಿದರು.

ಗ್ರಾಮಸ್ಥ ರಾಜೇಶ್ ಕಡಲಕೆರೆ ಕ್ವಾರಿ ವಿಷಯ ಪ್ರಸ್ತಾಪಿಸಿ, ಒಂದೂವರೆ ವರ್ಷದಿಂದ ಗ್ರಾಮಸಭೆಯಲ್ಲಿ ಅಕ್ರಮ ಕ್ವಾರಿಗಳ ಬಗ್ಗೆ ಮಾಹಿತಿ, ಅವುಗಳ ಬಗ್ಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಕೇಳುತ್ತಿದ್ದರೂ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಎಲ್ಲಿಂದಲೂ ಬಂದು ಇಲ್ಲಿ ಅಕ್ರಮವಾಗಿ ಕ್ವಾರಿ ಮಾಡುತ್ತಿರುವ ಮಾಫಿಯ ಸ್ಪಷ್ಟವಾಗಿ ಗೋಚರವಾಗುತ್ತಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಧಿಕಾರಿಗಳು ಅವರೊಂದಿಗೆ ಶಾಮೀಲಾಗಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ ಎಂದರು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ಆರು ಕ್ವಾರಿಗಳ ಬಗ್ಗೆ ವರದಿ ಮೇಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಗ್ರಾಮ ಆಡಳಿತಾಧಿಕಾರಿ ಗಾಯತ್ರಿ ಬಿ. ತಿಳಿಸಿದರು. ಅವುಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದಾಗ ಅಧಿಕಾರಿ ಉತ್ತರ ನೀಡುವುದನ್ನು ಗಮನಿಸಿದ ಗ್ರಾಮಸ್ಥರು, ಗ್ರಾಮಸಭೆಗಳಿಗೆ ತಹಸೀಲ್ದಾರ್ ಅಥವಾ ಕಂದಾಯ ನಿರೀಕ್ಷಕರು ಬರುವಂತಾಗಬೇಕು ಎಂದು ಆಗ್ರಹಿಸಿದರು.

ಬೀದಿದೀಪ ಅಳವಡಿಕೆಗೆ ಕ್ರಮ: ಹಳೇ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ವೇಳೆ ಗುತ್ತಿಗೆದಾರರು ಅದರಲ್ಲಿ ಸುಸ್ಥಿತಿಯಲ್ಲಿರುವ ಬೀದಿದೀಪ ಕೂಡ ತೆರವುಗೊಳಿಸುತ್ತಿದ್ದಾರೆ. ಹೊಸ ಕಂಬಗಳನ್ನು ಅಳವಡಿಸುವಾಗ ಆ ಬೀದಿ ದೀಪ ಹಾಕುವುದಿಲ್ಲ. ಹಂಡೇಲುಸುತ್ತು, ಹಂಡೇಲು ಶಾಲೆ, ಮಜ್ಜಿಗುರಿ ಸ್ಮಶಾನ ರಸ್ತೆಗಳು ಸಹಿತ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಡೆ ಇದೇ ಸಮಸ್ಯೆ ಇದೆ ಎಂದು ಸದಸ್ಯ ಮುರಳೀಧರ ಕೋಟ್ಯಾನ್ ಹೇಳಿದರು. ಈ ಕುರಿತು ಪರಿಶೀಲಿಸುತ್ತೇವೆ ಎಂದು ಮೆಸ್ಕಾಂ ಅಧಿಕಾರಿಗಳು ಹೇಳಿದರು.

ಚರಂಡಿ ತೊಂದರೆ: ಸಂಪಿಗೆಯಲ್ಲಿರುವ ರೆಸಾರ್ಟ್, ಅಂಗಡಿ, ಹೋಟೆಲ್ ಪರಿಸರದಲ್ಲಿ ಚರಂಡಿಯಿಂದ ತೊಂದರೆಯಾಗುತ್ತಿದೆ. ಕೊಳಚೆ ನೀರಿನಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಂಭವವಿದೆ ಎಂದು ಗ್ರಾಮಸ್ಥ ರೋಶನ್ ಹೇಳಿದರು. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಒ ಭೀಮಾ ನಾಯಕ ಬಿ.ಹೇಳಿದರು.

ಅಂಗನವಾಡಿಗಳಲ್ಲಿ ನೀರಿಲ್ಲ

ಪುತ್ತಿಗೆ ಗ್ರಾಪಂ ಮಂಜೂರಾದ ಅಂಗನವಾಡಿ, ಜಾಗದ ಅಭಾವದಿಂದ ಗಡಿ ಭಾಗದಲ್ಲಿರುವ ಮಾರ್ಪಾಡಿ ಗ್ರಾಮದಲ್ಲಿದೆ. ಇಲ್ಲಿ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಗ್ರಾಮಸ್ಥ ರಾಜೇಶ್ ಪ್ರಸ್ತಾಪಿಸಿದರು. ಸರ್ಕಾರಿ ಜಾಗ ಗುರುತಿಸಿ ಪುತ್ತಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಅಂಗನವಾಡಿ ಕಟ್ಟಡ ನಿರ್ಮಿಸಲು ಮನವಿ ನೀಡಿ ಎಂದು ಸಭೆಯ ನೋಡೆಲ್ ಅಧಿಕಾರಿಯಾದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ.ಕಾರಿಗಿ ಹೇಳಿದರು. ಕುಂಗೂರು ಅಂಗನವಾಡಿ ಕೇಂದ್ರದಲ್ಲೂ ನೀರಿನ ಸಮಸ್ಯೆ ಕಾಡುತ್ತಿದೆ ಎಂದು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಉಷಾ ಭಂಡಾರಿ ಹೇಳಿದರು. ಮೂಲಸೌಕರ್ಯಗಳ ಕೊರತೆ ಇದ್ದಲ್ಲಿ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಶೈಲಾ ಕೆ.ಕಾರಿಗಿ ಹೇಳಿದರು.