ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿನ ಅಕ್ರಮ ನೀರಾವರಿ ತಡೆಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರು ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್‌ಗೆ ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮಂಗಳವಾರ ಮನವಿ ಸಲ್ಲಿಸಿತು. 
ಜಿಲ್ಲೆ

ಅಕ್ರಮ ಪೈಪ್‌ಲೈನ್ ತೆರವುಗೊಳಿಸಲು ವಿವಿಧ ರೈತ ಸಂಘಗಳ ಒತ್ತಾಯ

Raichur

ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ಅಕ್ರಮವಾಗಿ ನೀರು ಪಡೆಯುತ್ತಿರುವ ಪೈಪ್‌ಗಳನ್ನು ಕಿತ್ತು ಹಾಕಿ ಕೆಳಭಾಗಕ್ಕೆ ಸಮರ್ಪಕವಾಗಿ ನೀರು ಒದಗಿಸಬೇಕು ಎಂದು ಕರ್ನಾಟಕ ರೈತ ಸಂಘ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಒತ್ತಾಯಿಸಿದೆ.

ಈ ಕುರಿತು ಎರಡು ಸಂಘಗಳ ನಿಯೋಗ ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತ ಕುಮಾರ್‌ಗೆ ಮಂಗಳವಾರ ಮನವಿ ಸಲ್ಲಿಸಿತು. ಮಸ್ಕಿ ನೀರಾವರಿ ವಿಭಾಗಕ್ಕೆ ಬರುವ 55ನೇ ಉಪ ಕಾಲುವೆಗೆ 50ಕ್ಕೂ ಹೆಚ್ಚು ಪಂಪ್‌ಸೆಟ್ ಮೂಲಕ ಅಕ್ರಮವಾಗಿ ನೀರು ಪಡೆಯಲಾಗುತ್ತಿದೆ. ಅಧಿಕಾರಿಗಳು ತೆರವುಗೊಳಿಸುತ್ತಿಲ್ಲ. ಇದರಿಂದ ಉಪ ಕಾಲುವೆ ಕೆಳಭಾಗದ ರೈತರಿಗೆ ನೀರು ದೊರೆಯದಂತಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಉಪ ಕಾಲುವೆ ಮೇಲ್ಭಾಗದಲ್ಲಿ ಕೆರೆ, ಹೊಂಡಗಳಿಗೆ ಪೈಪ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ. ಇಂತಹ ಭೂಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಬೇಕು. ವಾರಾಬಂದಿ ಪ್ರಕಾರ ನೀರು ಹರಿಸಬೇಕು. ಸಮರ್ಪಕ ಗೇಜ್ ನಿರ್ವಹಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.