ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಗುತ್ತಿಗೆದಾರರು ಜೊತೆಯಾಗಿ ಲೂಟಿ ಮಾಡುತ್ತಿದ್ದು, ಕಾಂಟ್ರಾಕ್ಟರ್ ಅಸೋಸಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಅಕ್ರಮ ಹಣ ಪತ್ತೆಯಾಗಿರುವ ಕುರಿತು ಇಡಿ ಹಾಗೂ ಸಿಬಿಐ ತನಿಖೆಯಾಗಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆಯಿಂದ ಎಲ್ಲದರಲ್ಲೂ ಭ್ರಷ್ಟಾಚಾರದ ಹಾವಳಿಯಿದೆ. ಗ್ರಾಮದಿಂದ ವಿಧಾನಸೌಧ ತನಕ ಭ್ರಷ್ಟಾಚಾರ ವ್ಯಾಪಿಸಿದೆ ಎಂದು ಹರಿಹಾಯ್ದರು.
ಬಹಿರಂಗವಾಗಿಯೇ ಕಮಿಷನ್ ದಂಧೆ ನಡೆಯುತ್ತಿದೆ. ಗುತ್ತಿಗೆದಾರರ ಬಾಕಿ ಹಣ ಬಿಡುಗಡೆಯಾದ ತಕ್ಷಣವೇ ಗುತ್ತಿಗೆದಾರನ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣ ಸಿಕ್ಕಿರುವುದು ಇದೇ ಮೊದಲು. ಸರ್ಕಾರ 10% ಕಮಿಷನ್ ಪಡೆದಿರುವದು ಸಾಬೀತಾಗಿದೆ. ಇನ್ನಷ್ಟು ಗುತ್ತಿಗೆದಾರರ ಮನೆ ಮೇಲೆ ದಾಳಿ ಮಾಡಿದರೆ ಇನ್ನಷ್ಟು ಕಮಿಷನ್ ಹಣ ಹೊರ ಬರಲಿದೆ ಎಂದರು.
ಗುತ್ತಿಗೆದಾರರ ಸಂಘದವರು ನಮ್ಮ ಮೆಲೆ ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡಿದ್ದರು. ಈಗ ಕಾಂಟ್ರಾಕ್ಟರ್ ಅಸೋಷಿಯೇಷನ್ ಸರ್ಕಾರದ ಕಮಿಷನ್ ಕಲೆಕ್ಷನ್ ಸೆಂಟರ್ ಆಗಿದೆ. ಈ ಹಿಂದೆ ಇದೇ ವ್ಯಕ್ತಿ ಲಂಚ ಕೊಟ್ಟಿರುವ ಆರೋಪ ಬಂದಾಗ ಆತ ನಾನು ಕಾಂಟ್ರಾಕ್ಟ್ ಮಾಡಿಲ್ಲ ಅಂತ ಹೇಳಿದ್ದರು.
ಕಾಂಟ್ರಾಕ್ಟರ್ ಮತ್ತು ಸರ್ಕಾರ ಒಂದಾಗಿ ರಾಜ್ಯ ಲೂಟಿ ಮಾಡಿದ್ದಾರೆ. ಅಕ್ರಮ ಹಣ ಸಂಗ್ರಹದ ಹಿನ್ನೆಲೆಯಲ್ಲಿ ಮನಿ ಲ್ಯಾಂಡರಿಂಗ್ ಆಕ್ಟನಲ್ಲಿ ಇಡಿ ತನಿಖೆ ಆಗಬೇಕು. ಭ್ರಷ್ಟಾಚಾರ ಕಾಯ್ದೆಯಡಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಕಮಿಷನ್ ಆರೋಪದ ಕುರಿತು ಪತ್ರಕರ್ತರ ಪ್ರಶ್ನೆಗೆ ಬೊಮ್ಮಾಯಿ ಉತ್ತರಿಸಿ, ಸಿಎಂ ಸಿದ್ದರಾಮಯ್ಯ ಅವರು ಯಾರಾದರೂ ನೋಡಿದ್ದೀರಾ ಅಂತ ಕೇಳಿದ್ದಾರೆ. ನಮ್ಮ ಸರ್ಕಾರದ ವಿರುದ್ದ 40% ಆರೋಪ ಮಾಡಿದಾಗ ನೀವು ನೋಡಿದ್ದೀರಾ ? ಈ ಪ್ರಕರಣದಲ್ಲಿ ಮುಖ್ಯಮಂತ್ರಿಯ ಯಾವುದೇ ಪಾತ್ರ ಇಲ್ಲದಿದ್ದರೆ, ನೀವೇ ನೇಮಿಸಿರುವ ನ್ಯಾ.ಮಾಗಮೋಹನದಾಸ್ ಆಯೋಗ ಇಲ್ಲವೇ ಲೋಕಾಯುಕ್ತಕ್ಕೆ ನೀಡಲಿ ಎಂದು ಬೊಮ್ಮಾಯಿ ಸೆಡ್ಡು ಹೊಡೆದರು.
ಐದು ರಾಜ್ಯದ ಚುನಾವಣೆಗೆ ಎಟಿಎಂ ತರಹ ಕೆಲಸ ಮಾಡುತ್ತಿರುವ ಸಿಎಂಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸೆಲೆಕ್ಟಿವ್ ಆಗಿ ಪೇಮೆಂಟ್ ಮಾಡಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರೆ ಹೇಳಿದರೆ, ಸರಿಪಡಿಸುವುದಾಗಿ ಸಿದ್ದರಾಮಯ್ಯ ಭರವಸೆ ನೀಡುವ ಮೂಲಕ ಭ್ರಷ್ಟಾಚಾರ ನಡೆದಿದೆ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದರು.
ಯಾವುದೇ ಸಮುದಾಯದ ವಿರುದ್ದ ಮಾತನಾಡುವ ವ್ಯಕ್ತಿಗಳು ಹೀನ ಮನಸ್ಥಿತಿಯವರು ಎಂದು ಪ್ರೊ.ಭಗವಾನ್ ಹೇಳಿಕೆ ಬಗ್ಗೆ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ಬೆಂಬಲಸುತ್ತಿರುವ ಕಾರಣ ಈ ರೀತಿಯ ಮಾತುಗಳನ್ನಾಡುತ್ತಿದ್ದಾರೆ ಎಂದು ದೂರಿದರು.