ರಾಯಚೂರು ಜಿಲ್ಲೆಯ ಲಿಂಗಸೂಗೂರು ಪುರಸಭೆ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಒಂಬತ್ತು ನಿವೇಶನಗಳಿಗೆ ಅನುಮೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಯೋಜನಾ ನಿರ್ದೇಶಕ ಹಾಗೂ ಹಾಲಿ ರಾಯಚೂರು ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ದ ಆಯುಕ್ತರ ಹೆಸರೂ ಕೇಳಿ ಬಂದ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಸೂಚನೆ ಮೇರೆಗೆ ಜಿಲ್ಲಾಡಳಿತ ತನಿಖೆಯನ್ನು ಗಂಭೀರವಾಗಿ ತೆಗೆದುಕೊಂಡಿದೆ.
ಈರಣ್ಣ ಬಿರಾದಾರ್ ಅವರು 2011 ರಿಂದ 2014ರವರೆಗೆ ಲಿಂಗಸುಗೂರು ಪುರಸಭೆ ಮುಖ್ಯಾಧಿಕಾರಿಯಾಗಿದ್ದರು. ಈ ಅವಧಿಯಲ್ಲಿ ಸರ್ಕಾರಿ ಉದ್ಯಾನ ಮತ್ತು ಸಾರ್ವಜನಿಕ ಜಾಗ ನಿವೇಶನಗಳಾಗಿಸಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿ ಕಟ್ಟಡ ನಿರ್ಮಾಣಕ್ಕೂ ಪರವಾನಗಿ ನೀಡಿದ್ದಾರೆಂಬ ಮಾತು ಹರಿದಾಡುತ್ತಿದೆ.
ತಾಲೂಕಿನ ಗುಡದನಾಳ ರಸ್ತೆಯ ಸರ್ವೇ ನಂ. 193/1, 6.32 ಎಕರೆ ಜಮೀನು ಭೂ ಪರಿವರ್ತನೆ ಮಾಡಿ ನಿವೇಶನ ಮಾಡಲಾಗಿದೆ. ಅದರಲ್ಲಿನ ಉದ್ಯಾನದ ಸ್ಥಳ ಹಾಗೂ ಹುಲಿಗುಡ್ಡದ ಸರ್ವೇ ನಂ. 7/1 ರಲ್ಲಿ 5.13ಎಕರೆ ಉದ್ಯಾನವನದ ಜಾಗದಲ್ಲಿ ಕಟ್ಟಡ ಕಟ್ಟಲು ಪರವಾನಗಿ ಬಿರಾದಾರ್ ಅವಧಿಯಲ್ಲಿ ನೀಡಲಾಗಿತ್ತು ಎಂಬುದು ಸಂಘಟನೆಗಳು ಆರೋಪ ಮಾಡಿದ್ದರು.
ಈ ಲೇಔಟ್‌ನಲ್ಲಿ ನಾಲ್ಕು ಉದ್ಯಾನ ಸ್ಥಳಗಳನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತಾ ಮಾಡಿಕೊಡಲಾಗಿತ್ತು. ಎಂಬುದು ಸದ್ಯದ ಆರೋಪ. ಈ ಅಕ್ರಮದಲ್ಲಿ ಇನ್ನಷ್ಟು ಅಧಿಕಾರಿಗಳು ಕೈಚಳಕ ತೋರಿದ್ದಾರೆಂಬ ಗುಮಾನಿ ಎದ್ದಿದ್ದರ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಆದೇಶ ಮಾಡಿದ್ದಾರೆ.
ಎಡಿಸಿ ನೇತೃತ್ವದಲ್ಲಿ ತನಿಖೆ
ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಒಂಬತ್ತು ನಿವೇಶನಗಳಿಗೆ ಅನುಮೋದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅದರ ಸತ್ಯಾಸತ್ಯತೆಯನ್ನು ಹುಡುಕುವ ಜವಾಬ್ದಾರಿಯನ್ನು ಎಡಿಸಿ ಶಿವಾನಂದ ಭಜಂತ್ರಿ ಅವರಿಗೆ ವಹಿಸಿ ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಒಂದು ವಾರದಲ್ಲಿ ವರದಿ ಸಲ್ಲಿಸಲು ಜಿಲ್ಲಾಡಳಿತ ತಿಳಿಸಿದೆ.
ಲಿಂಗಸೂಗೂರು ಪುರಸಭೆ ವ್ಯಾಪ್ತಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳಿಗೆ ಅನುಮೋದನೆ ನೀಡಲಾಗಿದೆಂದು ಪತ್ರಿಕೆಗಳನ್ನು ವರದಿಯಾಗಿದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆ ಮೇರೆಗೆ ಎಡಿಸಿ ನೇತೃತ್ವದಲ್ಲಿ ತನಿಖೆ ನಡೆಸಲು ಆದೇಶ ಮಾಡಲಾಗಿದೆ. ಒಂದು ವಾರದಲ್ಲಿ ವರದಿ ಬರಲಿದೆ.
ನಿತೀಶ್ ಕೆ. ಜಿಲ್ಲಾಧಿಕಾರಿ ರಾಯಚೂರು