ಜಿಲ್ಲೆ

ವಿದೇಶಿ ಪ್ರಜೆಗಳ ಅಕ್ರಮ ವಾಸ ಸರ್ವೇಗೆ ಎರಡು ವಾರ ಗಡುವು: ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಹಿತಿ

Dakshina Kannada

ಮಂಗಳೂರು: ರಾಜ್ಯದಲ್ಲಿ ವಿದೇಶಿಗರ ಅಕ್ರಮ ವಾಸ ಪತ್ತೆ ಹಚ್ಚುವ ಉದ್ದೇಶದಿಂದ ಪ್ರತಿ ಠಾಣಾ ವ್ಯಾಪ್ತಿಯ ಸರ್ವೇ ನಡೆಸಿ ಎರಡು ವಾರದೊಳಗೆ ವರದಿ ನೀಡುವಂತೆ ಇಲಾಖೆಗೆ ನಿರ್ದೇಶಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ನಗರದ ಪೊಲೀಸ್ ಕಮಿಷನರೆಟ್ ಕಚೇರಿಯಲ್ಲಿ ಸೋಮವಾರ ಸಾಯಂಕಾಲ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಾಸ್‌ಪೋರ್ಟ್, ವೀಸಾ ಸಹಿತ ಅಗತ್ಯ ದಾಖಲೆಗಳು ಇಲ್ಲದವರು, ದಾಖಲೆ ಅವಧಿ ಮುಗಿದ ಬಳಿಕವೂ ವಾಸವಾಗಿರುವವರು ಮತ್ತು ಅಕ್ರಮವಾಗಿ ನುಸುಳಿರುವವರನ್ನು ಬಂಧಿಸಲಾಗುವುದು ಎಂದರು.

ದ.ಕ.ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಅಪರಾಧ ಸಾಬೀತು ಪ್ರಮಾಣ ಕುಸಿದಿದೆ. ಸರ್ಕಾರಿ ವಕೀಲರ ಸಭೆಯಲ್ಲಿ ಕನ್ವಿಕ್ಷನ್ ಪರ್ಸಂಟೇಜ್ ಹೆಚ್ಚಿಸುವ ಕುರಿತು ಚರ್ಚಿಸಲಾಗಿದೆ. ಸೈಬರ್ ಕ್ರೈಮ್ ಅಪರಾಧ ಹೆಚ್ಚಳ ಹಿನ್ನೆಲೆಯಲ್ಲಿ ಸೈಬರ್ ಸ್ಟೇಷನ್‌ಗಳನ್ನು ಅಲರ್ಟ್ ಮಾಡಲಾಗುವುದು. ಸಾಮಾಜಿಕ ಜಾಲತಾಣದಲ್ಲಿ ಅಶಾಂತಿ ಸೃಷ್ಟಿಸುವವರ ಮೇಲೆ ನಿಗಾ ವಹಿಸಲಾಗುವುದು ಎಂದರು.

ವಕ್ಫ್ ಆಸ್ತಿ ಕಬಳಿಕೆ ವರದಿ ಅನುಷ್ಠಾನ ಆಗುತ್ತಿಲ್ಲ ಎಂದು ಪಕ್ಷ ಮುಖಂಡ ಅನ್ವರ್ ಮಾಣಿಪ್ಪಾಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅವರನ್ನು ಕರೆಸಿ ಮಾತಾಡುತ್ತೇನೆ. ಯಾವ ಹಿನ್ನೆಲೆಯಲ್ಲಿ ಅವರು ಮಾತನಾಡಿದ್ದಾರೆ ಗೊತ್ತಿಲ್ಲ ಎಂದರು. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ಎಸ್ಪಿ ಹೃಷಿಕೇಶ್ ಭಗವಾನ್ ಸೋಣಾವಣೆ, ಪೊಲೀಸ್ ಕಮಿಷನರ್ ಶಶಿಕುಮಾರ್ ಜತೆಗಿದ್ದರು.

ಸ್ಯಾಟಲೈಟ್ ಫೋನ್ ಮೇಲೆ ಕಣ್ಣು: ಕರಾವಳಿಯಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿದ್ದೇವೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಕೇಂದ್ರದ ಅಧಿಕಾರಿಗಳೊಂದಿಗೆ ರಾಜ್ಯ ಪೊಲೀಸರು ಸಂಪರ್ಕದಲ್ಲಿದ್ದಾರೆ. ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗುವ ಸ್ಥಳದ ಗುರುತನ್ನು ಕೇಂದ್ರವೇ ನೀಡಬೇಕಾಗುತ್ತದೆ. ಪ್ರಕರಣ ಸಂಬಂಧಿಸಿ ಈ ಹಿಂದೆ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದೆವು. ಕರಾವಳಿಯ ಸಮುದ್ರದಲ್ಲಿ ಹೋಗುವ ಹಡಗಿನಲ್ಲಿ ಇದು ಆ್ಯಕ್ಟಿವ್ ಆಗುತ್ತದೆ. ಆದರೆ ಕೆಲವು ಬಾರಿ ತಪ್ಪಾಗಿ ಕೆಲವೆಡೆ ಆ್ಯಕ್ಟಿವ್ ಆಗಿದೆ ಎಂಬುದನ್ನು ತೋರಿಸುತ್ತದೆ. ಸ್ಯಾಟಲೈಟ್ ಫೋನ್ ಬಗ್ಗೆ ವಿಶೇಷ ನಿಗಾ ಇರಿಸಲಾಗಿದೆ ಎಂದರು.

ಅಗ್ನಿವೀರರಿಗೆ ರಕ್ಷಾ ಸೇವೆಯಲ್ಲಿ ಆದ್ಯತೆ: ಅಗ್ನಿಪಥ ಉತ್ತಮ ಯೋಜನೆ. ಈ ಯೋಜನೆಯಡಿ ತರಬೇತಿ ಪಡೆದವರಿಗೆ ರಾಜ್ಯದ ರಕ್ಷಣೆಗೆ ಸಂಬಂಧಿಸಿದ ಇಲಾಖೆಯ ನೇಮಕಾತಿಯಲ್ಲೂ ಆದ್ಯತೆ ಸಿಗಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 50 ಲಕ್ಷ ಯುವಕರು ಅರ್ಜಿ ಸಲ್ಲಿಸಿರುವುದು ಯೋಜನೆಯನ್ನು ಜನ ಸ್ವೀಕರಿಸಿದ್ದಾರೆಂಬುದರ ಸಂಕೇತ ಎಂದರು. ಪಿಎಎಸ್‌ಐ ನೇಮಕಾತಿ ಅಕ್ರಮದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರನ್ನು ಜೈಲಿಗೆ ತಳ್ಳಲಾಗುವುದು. ಪರೀಕ್ಷೆ ಬರೆದ 54 ಸಾವಿರ ಅಭ್ಯ ರ್ಥಿಗಳಿಗೆ ಮಾತ್ರ ಹೊಸದಾಗಿ ಪರೀಕ್ಷೆ ನಡೆಸಲು ಚಿಂತಿಸಲಾಗಿದೆ. ಆದರೆ ತನಿಖಾ ವರದಿ ಬಂದ ಬಳಿಕ ಈ ಬಗ್ಗೆ ಅಂತಿಮ ನಿರ್ಧಾರ.ಪೊಲೀಸರ ಕಲ್ಯಾಣಕ್ಕಾಗಿ ಈ ವರ್ಷ 2000 ಕೋಟಿ ರೂ. ಅನುದಾನ ಇರಿಸಲಾಗಿದೆ ಎಂದರು.