ಹೊಸಕೋಟೆ ತಾಲೂಕು ಮಲ್ಲಿಮಾಕನಪುರ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ತಾಪಂ ಇಒ ಮುನಿರಾಜು, ಹೊಸಕೋಟೆ ಇಒ ಡಾ.ನಾರಾಯಣಸ್ವಾಮಿ, ದೊಡ್ಡಬಳ್ಳಾಪುರ ಸಾಮಾಜಿಕ ವಲಯ ಅರಣ್ಯಾಧಿಕಾರಿ ರುದ್ರಮೂರ್ತಿ, ದೊಡ್ಡಬಳ್ಳಾಪುರ ಸಹಾಯಕ ಯೋಜನಾ ಅಧಿಕಾರಿ ನೇತ್ರಾವತಿ ಇದ್ದರು. 
ಜಿಲ್ಲೆ

ಅರಣ್ಯಪ್ರದೇಶಕ್ಕೆ ಅಕ್ರಮ ಇ&ಖಾತೆ?

ನಂದಗುಡಿ: ಹೊಸಕೋಟೆ ತಾಲೂಕು ಚೊಕ್ಕಹಳ್ಳಿ ಗ್ರಾಪಂ ವ್ಯಾಪ್ತಿಯ ಮಲ್ಲಿಮಾಕನಪುರದ ಸರ್ವೇ ನಂ.1ರಲ್ಲಿ ಅರಣ್ಯ ಇಲಾಖೆಯದು ಎನ್ನಲಾದ 7.33ಎಕರೆ ಜಮೀನನ್ನು ಅಕ್ರಮವಾಗಿ 38 ಜನರಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬುಧವಾರ ವಿವಿಧ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದರು.

ಆಶ್ರಯ ನಿವಾಸ ನಿವೇಶನಗಳಿಗೆ ಭೂ ಮಂಜೂರಾತಿ ಪಡೆಯದೆ ಸರ್ಕಾರಿ ಜಮೀನನ್ನು ಚೊಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಮೂದಿಸಿಕೊಂಡು 2016&17 ರಿಂದ 2023&24ನೇ ಸಾಲಿನಲ್ಲಿದ್ದ ಪಿಡಿಒ ಕೆ.ಚನ್ನಪ್ಪ, ನರ್ಮದಾ ಹಾಗೂ ಎಂ.ಕೆ.ಮಹೇಶ್​ ಎಂಬುವರು ನಕಲಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಹೊಸಕೋಟೆ ನಗರದ ಸೌಮ್ಯಾ ಎಂಬುವರು ತಾಪಂ ಇಒಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ತನಿಖಾ ತಂಡ ಆಗಮಿಸಿತ್ತು.

ಮಲ್ಲಿಮಾಕನಪುರದ ಸರ್ವೇ ನಂ.1ರ ಸ್ವರೂಪ, ಮನೆ ನಿರ್ಮಾಣ ಮಾಡಿಕೊಂಡಿರುವು, ದಿಶಾಂಕ ಆ್ಯಪ್​ ಮೂಲಕ ಪರಿಶೀಲನೆ ಮಾಡಿ ಹಾಗೂ ಗ್ರಾಮಸ್ಥರಿಂದ ಮಾಹಿತಿ ಸಂಗ್ರಹಿಸಿದರು. ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಲಾಗುವುದು ಎಂದು ದೊಡ್ಡಬಳ್ಳಾಪುರ ಇಒ ಎನ್​.ಮುನಿರಾಜು ತಿಳಿಸಿದರು.