ವಿಜಯಪುರ: ಮಾದಕ ಪದಾರ್ಥವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಟ್ಟು 25 ಲಕ್ಷ ರೂ. ಮೌಲ್ಯದ ಸಾಮಾಗ್ರಿ ವಶಕ್ಕೆ ಪಡೆದಿರುವುದಾಗಿ ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ವಿಜಯಪುರ ತಾಲೂಕಿನ ಸಿಂದಗಿ ಕ್ರಾಸ್‌ದಿಂದ ಬುರಣಾಪುರದ ಮಾರ್ಗ ಮಧ್ಯೆ ಕಾರ್‌ನಲ್ಲಿ ಗುರುವಾರ ದಾಳಿ ನಡೆದಿದ್ದು, ತೆಲಂಗಾಣ ಮೂಲದ ಸಂತೋಷ ನಾಗಶೆಟ್ಟಿ ರಾಠೋಡ (35), ಮಹಾರಾಷ್ಟ್ರ ಮೂಲದ ಸಂಜು ಊರ್ಫ್ ಸಂಜೀವ ಕಿಶನ್ ಆಡೆ ರಾಠೋಡ (33) ಹಾಗೂ ಸಂತೋಷ ಧನಸಿಂಗ ರಾಠೋಡ (38) ಎಂಬುವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳು ಮಾರುತಿ ಸುಜುಕಿ ಕಂಪೆನಿಯ ಕೆಂಪು ಬಣ್ಣದ ಎರ್ಟಿಗಾ ಕಾರ್ ನಂ. ಟಿ.ಎಸ್-2 ಇ.ಎಚ್-4408 ಹಾಗೂ ಮಾರುತಿ ಸುಜುಕಿ ಕಂಪೆನಿಯ ಬಿಳಿ ಬಣ್ಣದ ಸ್ವಿಫ್ಟ್ ಡಿಜೈರ್ ಟೂರ್ ಕಾರ್ ನಂ. ಎಂ.ಎಚ್-02, ಸಿಆರ್-7960 ನೇದ್ದವುಗಳಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿ ಇಟ್ಟುಕೊಂಡು ಸಾಗಿಸುತ್ತಿದ್ದಾರೆಂಬ ಮಾಹಿತಿ ಲಭಿಸಿತ್ತು. ಕೂಡಲೇ ದಾಳಿ ನಡೆಸಲಾಗಿ ರೂ. 22 ಲಕ್ಷ ಮೌಲ್ಯದ ಸುಮಾರು 44 ಕೆಜಿ ಗಾಂಜಾ ಸಾಗಿಸುತ್ತಿರುವ ಆರೋಪಿಗಳು ಸಾಕ್ಷೃ ಸಮೇತ ಸಿಕ್ಕಿ ಬಿದ್ದಿದ್ದಾರೆ. ಎರಡು ಕಾರ್ ಮೌಲ್ಯ ಸೇರಿ ಒಟ್ಟು 25 ಲಕ್ಷ ರೂ.ಮೌಲ್ಯದ ಸಾಮಗ್ರಿ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿವೈಎಸ್‌ಪಿ ಸುನೀಲ ಆರ್.ಕಾಂಬಳೆ, ಸಿಪಿಐ ರಮೇಶ ಸಿ.ಅವಜಿ, ಪಿಎಸ್‌ಐ ಮಲ್ಲಿಕಾರ್ಜುನ ತಳವಾರ, ಸಿಎಚ್‌ಸಿ ಆರ್.ಡಿ. ಅಂಜುಟಗಿ, ಆರ್.ಐ. ಲೋಣಿ, ಎಸ್.ಜಿ. ದಾನಪ್ಪಗೋಳ, ಆರ್.ಬಿ. ಕೋಳಿ, ಎಚ್.ಎನ್. ಬಾಗವಾನ, ಎಂ.ಎಂ. ಕುರುವಿನಶೆಟ್ಟಿ, ಎ.ಬಿ. ಗದ್ಯಾಳ, ಎಸ್.ಆರ್. ಬಡಚಿ, ಡಿ.ಆರ್.ಪಾಟೀಲ, ಎಂ.ಕೆ. ಹಾವಡಿ, ಎಸ್.ಕೆ. ಜೇವೂರ, ಮಲ್ಲು ಹೂಗಾರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯಶಸ್ವಿ ಕಾರ್ಯಾಚರಣೆ ನಡೆಸಿದ ತಂಡದ ಕಾರ್ಯ ಶ್ಲಾಘನೀಯ ಎಂದು ಎಸ್‌ಪಿ ನಿಂಬರಗಿ ತಿಳಿಸಿದರು.
ಎಎಸ್‌ಪಿ ಶಂಕರ ಮಾರಿಹಾಳ ಹಾಗೂ ರಾಮನಗೌಡ ಹಟ್ಟಿ ಸೇರಿದಂತೆ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.