ಜಿಲ್ಲೆ

ಅಕ್ರಮ ದನ ಸಾಗಾಟ ವಿಟ್ಲ ಠಾಣೆಯಲ್ಲಿ ಎರಡು ಪ್ರಕರಣ ದಾಖಲು!

Mangaluru - Nishantha Narayana

ವಿಟ್ಲ: ಕುದ್ದುಪದವು - ಪೆರುವಾಯಿ ರಸ್ತೆಯ ಅಳಿಕೆ ಗ್ರಾಮದ ಮುಳಿಯದಲ್ಲಿ ಪರವಾನಿಗೆ ಇಲ್ಲದೆ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ 5 ಜಾನುವಾರುಗಳನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರನ ದಾಖಲಿಸಿದ್ದಾರೆ. ಬೈಕ್ ನಲ್ಲಿ ಬಂದ ಐದು ಮಂದಿ ಜಾನುವಾರು ಸಾಗಾಟ ಮಾಡುತ್ತಿದ್ದವರನ್ನು ಅಡ್ಡಗಟ್ಟಿ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ ಬಗ್ಗೆಯೂ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮಂಜೇಶ್ವರ ಬಾಕ್ರಬೈಲು ನಿವಾಸಿ ಇಬ್ರಾಹಿಂ ಯಾನೆ ಮೋನು, ಮಂಜೇಶ್ವರ ಬಾಕ್ರಬೈಲು ನಿವಾಸಿ ಮೂಸಾ, ಕನ್ಯಾನ ಗ್ರಾಮದ ನಿವಾಸಿ ಹಮೀದ್ ಯಾನೆ ಜಲಾಲ್, ಸಾಲೆತ್ತೂರಿನ ಹಮೀದ್ ಎಂಬವರು ಆರೋಪಿಗಳಾಗಿದ್ದಾರೆ. 5 ಜಾನುವಾರುಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನದೊಂದಿಗೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಆ.16ರಂದು ಬೆಳಗ್ಗೆ ಕುದ್ದುಪದವು ಕಡೆಯಿಂದ ಪೆರುವಾಯಿ ಕಡೆಗೆ ವಾಹನದಲ್ಲಿ ಯಾವುದೇ ಪರವಾನಿಗೆ ಇಲ್ಲದೇ 5 ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕೇರಳ ಕಡೆಗೆ ಮಾಂಸಕ್ಕಾಗಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದಾಗ ಪತ್ತೆಹಚ್ಚಿದ ವಿಟ್ಲ ಪೊಲೀಸ್ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣ ಕಾಯ್ದೆ, ಪ್ರಾಣಿ ಹಿಂಸೆ ನಿ಼ಷೇಧ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಜಯ ಪ್ರಶಾಂತ, ಲಕ್ಷೀಶ ಮತ್ತು ಮೂರು ಮಂದಿಯ ಮೇಲೆ ದೂರು ದಾಖಲಾಗಿದೆ. ಗೂಡ್ಸ್ ವಾಹನದಲ್ಲಿ ಆ.15ರಂದು ಇಬ್ರಾಹಿಂ ಯಾನೆ ಮೋನು, ಹಮೀದ್ ಯಾನೆ ಜಲಾಲ್ ಮತ್ತು ಸಾಲೆತ್ತೂರಿನ ಹಮೀದ್ ಸೇರಿ ನಾಲ್ಕು ಮಂದಿ ಮುಳಿಯ ಎಂಬಲ್ಲಿಂದ 5 ಜಾನುವಾರುಗಳಗಳನ್ನು ಖರೀದಿ ಮಾಡಿಕೊಂಡು ಗೂಡ್ಸ್ ವಾಹನದಲ್ಲಿ ತುಂಬಿಕೊಂಡು, ಕಜೆ ಎಂಬಲ್ಲಿಗೆ ಸಾಗಾಟ ಮಾಡುತ್ತಿರುವಾಗ ಆ.16ರಂದು ಮುಂಜಾನೆ ಬಂಟ್ವಾಳ ತಾಲೂಕು ಅಳಿಕೆ ಗ್ರಾಮದ ಮುಳಿಯ ಎಂಬಲ್ಲಿ ಮೂರು ಮೋಟಾರು ಸೈಕಲ್ ಮತ್ತು ಒಂದು ಕಾರನ್ನು ರಸ್ತೆಗೆ ಅಡ್ಡವಾಗಿಟ್ಟು ಅಕ್ರಮ ಕೂಟ ಸೇರಿಕೊಂಡು ಗೂಡ್ಸ್ ವಾಹನದಲ್ಲಿದ್ದ ನಾಲ್ಕು ಜನರನ್ನು ಎಳೆದು ಹಾಕಿ ಬೇಸ್ಬಾಲ್ ಬ್ಯಾಟ್ ಹಾಗೂ ಕತ್ತಿಯಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ ಬಗ್ಗೆ ಪಾತೂರು ಗ್ರಾಮ ಮಂಜೇಶ್ವರ ನಿವಾಸಿ ಮೂಸಾ ಪ್ರಾಯ(55) ದೂರಿನಲ್ಲಿ ಹೇಳಿದ್ದಾರೆ.