ಕಾರವಾರ: ಗೋವಾದ ವ್ಯಕ್ತಿಗಳಿಬ್ಬರು ಕಾರಿನಲ್ಲಿ ಸಾಗಿಸುತ್ತಿದ್ದ ದಾಖಲೆ ಇಲ್ಲದ 14.15 ಲಕ್ಷ ರೂ.ಗಳನ್ನು ಚಿತ್ತಾಕುಲಾ ಠಾಣೆ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದಾರೆ.
ಬುಧವಾರ ಸಾಯಂಕಾಲ ಗೋವಾ ಕಾಣಕೋಣದ ವ್ಯಾಪಾರಿ ಸತ್ಯೇಂದ್ರ ಬಾಳಸು ಭಗತ್ ಎಂಬುವವರಿಂದ 5.25 ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಕದ್ರಾ ಸಿಪಿಐ ಗೋವಿಂದರಾಜ ದಾಸರಿ ಅವರ ನೇತೃತ್ವದಲ್ಲಿ ಪಿಎಸ್‌ಐಗಳಾದ ಉದ್ದಪ್ಪ ಧರೆಪ್ಪನವರ್ ಹಾಗೂ ರವೀಂದ್ರ ಬಿರಾದಾರ, ಸಿಬ್ಬಂದಿ ಮುಕುಂದ ನಾಯ್ಕ, ಸಂತೋಷ ಉರ್ಮಿ, ಮಹಿಳಾ ಪಿಸಿ ರಾಧಾ ಗೌಡ, ಅಬಕಾರಿ ಪೇದೆ ಸುರೇಶ ಹಾರೆಗೊಪ್ಪ, ಜಿಲ್ಲಾ ಸಂಖ್ಯಾ ಸಂಗ್ರಹಣಾಽಕಾರಿ ಕಚೇರಿ ಎಫ್‌ಡಿಸಿ ವಿನಯ ಮಹಾದೇವ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ಗುರುವಾರ ಸಾಯಂಕಾಲ ಗೋವಾದ ಅನೂಪ ಪಂತ್ ಎಂಬುವವರು ದಾಖಲೆ ಇಲ್ಲದೇ ಸಾಗಿಸುತ್ತಿದ್ದ 8.90 ಲಕ್ಷ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಧಾನಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ವಿವಿಧೆಡೆ ಚೆಕ್‌ಪೋಸ್ಟ್ ತೆರೆದು ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದ್ದು, ದಾಖಲೆ ಇಲ್ಲದೇ 2 ಲಕ್ಷಕ್ಕಿಂತ ಹೆಚ್ಚಿನ ಹಣ ಸಾಗಿಸುತ್ತಿರುವುದು ಪತ್ತೆಯಾದಲ್ಲಿ ಅದನ್ನು ವಶಕ್ಕೆ ಪಡೆಯಲಾಗುತ್ತಿದೆ. ಸಂಬಂಧಪಟ್ಟವರು ದಾಖಲೆ ನೀಡಿದರೆ, ಅದನ್ನು ಬಿಡುಗಡೆ ಮಾಡಲಾಗುತ್ತದೆ.