ಜಿಲ್ಲೆ

ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾನೂನು ಬಾಹಿರ ಚಟುವಟಿಕೆ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ: ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ಕಾಂಗ್ರೆಸ್ ಪಕ್ಷ ಎಲ್ಲ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡಲು ಸಿದ್ಧವಾಗಿದೆ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ವಾಪಸ್ ಪಡೆಯಲು ಸಾಧ್ಯವೇ ಇಲ್ಲ. ಆದರೆ, ಕಾಂಗ್ರೆಸ್ ಕಾನೂನು ಬಾಹಿರವಾಗಿ ಪ್ರಕರಣವನ್ನು ವಾಪಾಸ್ ಪಡೆಯುವ ಕೆಲಸ ಮಾಡಿದೆ ಎಂದರು.

ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ಮೇಲೆ ಕಠಿಣ ಕಾನೂನುಗಳನ್ನು ಹಾಕಲಾಗಿತ್ತು. ಆಗ ಕಡಿಮೆ ಸಮಯದಲ್ಲಿ ಸಾವಿರಾರು ಜನ ಸೇರಿ ಗಲಭೆ ಮಾಡಿದ್ದರು. ಅಂದಿನ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಸ್ಥಳಕ್ಕೆ ದೌಡಾಯಿಸಿ, ಪರಿಸ್ಥಿತಿ ನಿಯಂತ್ರಿಸಿದ್ದರು. ಹೆಚ್ಚಿನ ಅನಾಹುತ ತಪ್ಪಿಸಿದ್ದರು. ಆ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿದೆ ಎಂದು ದೂರಿದರು. ಕಾಂಗ್ರೆಸ್ ಸರ್ಕಾರ ಗಲಭೆ ಪ್ರಕರಣವನ್ನು ವಾಪಸ್ ಪಡೆದು, ಸಂವಿಧಾನಕ್ಕೆ ಅಗೌರವ ತೋರುತ್ತಿದೆ. ಮತಬ್ಯಾಂಕ್​ಗಾಗಿ ಸಮಾಜದ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಹರಿಹಾಯ್ದರು.

ಕಾಂಗ್ರೆಸ್ ಸರ್ಕಾರದ ನಿರ್ಧಾರಗಳು ಮುಂದೆ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತದೆ. ಜಾತಿಗಳ ನಡುವೆ ಹೋರಾಟ ನಡೆಯಲು ಕಾರಣವಾಗುತ್ತದೆ. ಈ ನಿರ್ಧಾರವನ್ನು ಕಾಂಗ್ರೆಸ್ ಕೈಬಿಡಬೇಕು ಎಂದು ಒತ್ತಾಯಿಸಿದರು.

ನಿಜವಾದ ಭಯೋತ್ಪಾದಕರು ಬೇರೆಡೆ ಇದ್ದಾರೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಡುವ ಮಾತುಗಳು ಯಾಕೆ ಕೆಳಮಟ್ಟಕ್ಕೆ ಹೋಗಿವೆ ಗೊತ್ತಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ ಅವರು ಭಯೋತ್ಪಾದಕರನ್ನು ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ರಾಜಕೀಯ ನಾಯಕರ ನಡುವೆ ಭಯೋತ್ಪಾದಕ ಪದ ಬಳಕೆ ಸರಿಯಲ್ಲ ಎಂದರು.

ಮಲ್ಲಿಕಾರ್ಜುನ ಖರ್ಗೆ ಅವರೊಬ್ಬ ಹಿರಿಯ ರಾಜಕಾರಣಿ. ಅವರಿಗೆ ಸರ್ಕಾರಿ ಭೂಮಿ ಮೇಲೆ ಪ್ರೀತಿ ಏಕೆಂಬುದು ಗೊತ್ತಾಗಿಲ್ಲ. ಸ್ವಂತ ಭೂಮಿ ಖರೀದಿಸಿ ಟ್ರಸ್ಟ್ ನಡೆಸಬಹುದಿತ್ತು. ಅವರು ತಪ್ಪು ಮಾಡಿದಕ್ಕೆ ಭೂಮಿ ವಾಪಸ್ ಕೊಟ್ಟಿದ್ದಾರೆ. ಇಲ್ಲದೇ ಹೋದಲ್ಲಿ ಹೆದರುವ ಅವಶ್ಯಕತೆ ಇರಲಿಲ್ಲ ಎಂದು ಶೆಟ್ಟರ್ ಹೇಳಿದರು.

==========