ಜಿಲ್ಲೆ

ಅಕ್ರಮ ಚಟುವಟಿಕೆ ನಿಯಂತ್ರಣಕ್ಕೆ ಬದ್ಧ

Belagavi

ಖಾನಾಪುರ: ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ, ಜೂಜು, ಮಟ್ಕಾ, ಗಾಂಜಾ ಮತ್ತು ಅಕ್ರಮ ಸಾರಾಯಿ ಮಾರಾಟ ದಂಧೆಗಳು ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಮುಂದಿನ ದಿನಗಳಲ್ಲಿ ಇಂತಹ ಸಮಾಜದ್ರೋಹಿ ಕೃತ್ಯಗಳಿಗೆ ಕಡಿವಾಣ ಹಾಕಲು ತಾವು ಬದ್ಧ ಎಂದು ಬೈಲಹೊಂಗಲ ಉಪವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರದೀಪ ಗುಂಟಿ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಿದ್ದ ಕರೊನಾ ಸೇನಾನಿಗಳ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಖಾನಾಪುರ ತಾಲೂಕಿನ ನಾಗರಿಕರು ಅಕ್ರಮಗಳ ಬಗ್ಗೆ ತಮ್ಮನ್ನು ನೇರವಾಗಿ ಭೇಟಿಯಾಗಿ ದೂರು ಸಲ್ಲಿಸಬಹುದು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವುದು. ಜೂ.11ರಿಂದ ಪ್ರತಿ ಗುರುವಾರ ಖಾನಾಪುರ ಮತ್ತು ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕರಿಂದ ದೂರು ಹಾಗೂ ಕುಂದು-ಕೊರತೆಗಳನ್ನು ಸ್ವೀಕರಿಸಲಾಗುವುದು.

ನಾನು ಪೊಲೀಸ್ ಕಚೇರಿಯ ಸಿಬ್ಬಂದಿಯೊಂದಿಗೆ ಪ್ರತಿ ಗುರುವಾರ ಇಡೀ ದಿನ ಖಾನಾಪುರದಲ್ಲಿ ಇರುತ್ತೇನೆ. ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದೂರುಗಳನ್ನು ಸ್ವೀಕರಿಸಿ ಸಾಧ್ಯವಾದಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸುವ ಪ್ರಯತ್ನ ಮಾಡುವ ನಿರ್ಧಾರ ಮಾಡಿದ್ದೇವೆ. ಇದಕ್ಕೆ ತಾಲೂಕಿನ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಬಳಿಕ ತಾಲೂಕಿನಲ್ಲಿ ಕರೊನಾ ಸೋಂಕು ನಿಯಂತ್ರಿಸಲು ಸಹಕರಿಸುತ್ತಿರುವ ಕರೊನಾ ಸೇನಾನಿಗಳು ಹಾಗೂ ಪತ್ರಕರ್ತರನ್ನು ಪೊಲೀಸ್ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು. ಖಾನಾಪುರ ಮತ್ತು ನಂದಗಡ ಠಾಣೆಗಳ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಸಿಪಿಐ ಸುರೇಶ ಶಿಂಗಿ ಸ್ವಾಗತಿಸಿದರು. ಪಿಎಸ್‌ಐ ಪಾಟೀಲ ವಂದಿಸಿದರು.

ಸಹಜ ಸ್ಥಿತಿಯತ್ತ ಮುನವಳ್ಳಿ ಮುನವಳ್ಳಿಯಲ್ಲಿ ಕರೊನಾ ಸೋಂಕಿತ ವ್ಯಕ್ತಿಯ ವರದಿ ನೆಗೆಟಿವ್ ಬಂದಿದ್ದರಿಂದ ಕಂಟೇನ್ಮೆಂಟ್ ಪ್ರದೇಶ ಹೊರತು ಪಡಿಸಿ ಜನಜೀವನ ಸಹಜ ಸ್ಥಿತಿಗೆ ಮರಳಿದೆ. ಇಲ್ಲಿನ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಸೋಮವಾರ ಹಾಗೂ ಗುರುವಾರ ಸಂತೆ ರದ್ದು ಮಾಡಿದ್ದು ಮತ್ತು ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡುವ ನಿರ್ಧಾರವನ್ನು ಹಿಂಪಡೆದಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಳಿಸಿದ್ದಾರೆ.