ಹುಬ್ಬಳ್ಳಿ: ಎಲ್ಲರ ಚಟುವಟಿಕೆಗಳ ಮೇಲೆ ಸದಾ ನಿಗಾ ಇರಿಸುವುದು ಕಷ್ಟದ ಕೆಲಸ. ಆದರೂ ಜನರ ಸಹಭಾಗಿತ್ವದಿಂದ ಇದೆಲ್ಲವೂ ಸುಲಭದ ಕೆಲಸ. ಪೊಲೀಸರಿಗೆ ಅಪರಾಧದ ಬಗ್ಗೆ ಮಾಹಿತಿ ನೀಡಿದರೆ ತಕ್ಷಣ ಕ್ರಮ ಜರುಗಿಸಲು ಸಾಧ್ಯವಾಗಲಿದೆ ಎಂದು ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಹೇಳಿದರು.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ನಗರದ ಬಿವಿಬಿ ಕಾಲೇಜ್ನಲ್ಲಿ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ದಿನ, ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹು-ಧಾ ವ್ಯಾಪ್ತಿಯಲ್ಲಿ ಸಂಚಾರ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ. ಸಂಚಾರ ನಿಯಮಗಳು ಪೊಲೀಸರಿಗಾಗಿ ಅಲ್ಲ, ನಮ್ಮ ಸುರಕ್ಷತೆಗೆ ಇವೆ ಎಂಬುದನ್ನು ಜನರು ಅರಿತು, ಪಾಲಿಸಬೇಕು ಎಂದು ಸಲಹೆ ನೀಡಿದರು.
ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರಾಜೀವ್ ಎಂ. ಮಾತನಾಡಿ, ವಿದ್ಯಾವಂತರೇ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ದುರಂತ. ಯುವಕರು ಕ್ಷಣಿಕ ಸುಖಕ್ಕಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಕಾನೂನು ಗೌರವಿಸಿ, ಪಾಲಿಸಬೇಕು ಎಂದು ತಿಳಿವಳಿಕೆ ನೀಡಿದರು.
ಎಸಿಪಿ ಬಲ್ಲಪ್ಪ ನಂದಗಾವಿ, ಬಿವಿಬಿ ಕಾಲೇಜಿನ ಎಂ.ಆರ್. ಪಾಟೀಲ ಮಾತನಾಡಿದರು.