ಜಿಲ್ಲೆ

ಇಂಡುವಾಳು ಗ್ರಾಪಂನಿಂದ ಅಕ್ರಮ ಖಾತೆ: ಕ್ರಿಮಿನಲ್ ಕೇಸ್ ದಾಖಲಿಸಲು ಶಾಸಕ ಸೂಚನೆ

ಮಂಡ್ಯ: ಮಂಡ್ಯ ನಗರಸಭೆ ವ್ಯಾಪ್ತಿಗೆ ಸೇರಿದ ಜಾಗವನ್ನು ಇಂಡುವಾಳು ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಕ್ರಮವಾಗಿ ಖಾತೆ ಮಾಡಿಕೊಡುತ್ತಿರುವ ದಂಧೆ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಾಸಕ ರವಿಕುಮಾರ್ ಗಣಿಗ ಸೂಚನೆ ನೀಡಿದರು.

ನಗರದ 7 ಮತ್ತು 8ನೇ ವಾರ್ಡ್‌ನಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ಅಕ್ರಮ ದಂಧೆಯ ಮಾಹಿತಿಯನ್ನು ಸ್ಥಳೀಯರು ನೀಡಿದರು. ನಗರಸಭೆ ಸೇರಿದ ಜಾಗವನ್ನು ಇಂಡುವಾಳು ಗ್ರಾಪಂನಿಂದ ಅಕ್ರಮವಾಗಿ ಖಾತೆ ಮಾಡಿಕೊಡಲಾಗುತ್ತಿದೆ. ಇದರಿಂದಾಗಿ ನಗರಸಭೆಗೆ ಕೋಟ್ಯಂತರ ರೂ ತೆರಿಗೆ ವಂಚಿಸಲಾಗುತ್ತಿದೆ. ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲ ಸೌಕರ್ಯವನ್ನು ನಗರಸಭೆಯಿಂದ ನೀಡಲಾಗುತ್ತಿದೆ. ಆದರೆ ತೆರಿಗೆಯನ್ನು ಗ್ರಾಪಂಗೆ ಪಾವತಿಸಲಾಗುತ್ತಿದೆ. ನಗರಸಭೆಗಾದರೆ ದುಬಾರಿ ತೆರಿಗೆ ಕಟ್ಟಬೇಕು, ಅದೇ ಗ್ರಾಪಂಗಾದರೆ ಕಡಿಮೆಯಾಗಲಿದೆ ಎಂದು ವಂಚಿಸಲಾಗುತ್ತಿದೆ. ನಗರಸಭೆಗೆ ಸೇರಿದ ಜಾಗವನ್ನು ಗ್ರಾಪಂ ವ್ಯಾಪ್ತಿ ಎಂದು ದಾಖಲೆ ಮಾಡಿಕೊಡುವ ಹಿಂದೆ ದೊಡ್ಡ ದಂಧೆಯೇ ನಡೆಯುತ್ತಿದೆ. ಇಲ್ಲದಿದ್ದರೆ ದಾಖಲೆ ಕೊಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

25 ಸಾವಿರ ರೂಗೆ ಖಾತೆ: ವಿ.ವಿ ನಗರದ 15ನೇ ಕ್ರಾಸ್‌ನಲ್ಲಿ ಸರ್ಕಾರಕ್ಕೆ ಸೇರಿದ ಜಾಗವನ್ನು ಖಾಸಗಿಯವರ ಹೆಸರಿಗೆ ಖಾತೆ ಮಾಡಿಕೊಡುತ್ತಿರುವ ಬಗ್ಗೆ ಮಹಿಳೆಯೊಬ್ಬರು ಶಾಸಕ ಗಮನಸೆಳೆದರು. ಪ್ರಭಾವಿಗಳು 25 ಸಾವಿರ ರೂ ಕೊಟ್ಟರೆ ಇಂಡುವಾಳು ಗ್ರಾಪಂ ಅಧಿಕಾರಿಗಳು ಖಾತೆ ಮಾಡಿಕೊಡುತ್ತಿದ್ದಾರೆಂದು ದಾಖಲೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ಇದೊಂದು ಗಂಭೀರ ಪ್ರಕರಣವೆಂದು ಪರಿಗಣಿಸಲಾಗಿದೆ. ಇದರ ಹಿಂದೆ ದೊಡ್ಡ ಜಾಲವೇ ಇದೆ ಎನ್ನುವುದು ಕಂಡುಬರುತ್ತಿದೆ. ಆದ್ದರಿಂದ ಕೂಡಲೇ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅಂತೆಯೇ ಸರ್ಕಾರಿ ಜಾಗವನ್ನು ಖಾತೆ ಮಾಡಿಸಿಕೊಂಡಿರುವ ಬಗ್ಗೆ ಕ್ರಮ ವಹಿಸಲಾಗುವುದು. ಈ ಸಂಬಂಧ ಸರ್ವೇ ನಡೆಸಿ ಜಾಗವನ್ನು ಬಿಡಿಸಿಕೊಂಡು ಜನರಿಗೆ ಅನುಕೂಲವಾಗುವಂತಹ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಮುಖಂಡ ರವಿ ಭೋಜೇಗೌಡ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಪೌರಾಯುಕ್ತ ಮಂಜುನಾಥ್, ನಗರಸಭೆ ಮಾಜಿ ಸದಸ್ಯರಾದ ಕೆ.ಸಿ.ರವೀಂದ್ರ, ಲೋಕೇಶ್, ನಗರ ಬ್ಲಾೃಕ್ ಕಾಂಗ್ರೆಸ್ ಅಧ್ಯಕ್ಷ ರುದ್ರಪ್ಪ ಇತರರಿದ್ದರು.

ಅಧಿಕಾರಿಗಳ ದುರಾಡಳಿತ ಬಟಾಬಯಲು: ನಗರದ ಅಭಿವೃದ್ಧಿಯ ವಿಚಾರದಲ್ಲಿ ಮುಂದಾಲೋಚನೆ ಇಲ್ಲದೆ ಅಧಿಕಾರಿಗಳು ತೆಗೆದುಕೊಂಡಿರುವ ದುರಾಡಳಿತ ಕ್ರಮಗಳು ಶಾಸಕರ ಎದುರೇ ಬಟಾಬಯಲಾಯಿತು.

ಕಮಿಷನ್ ಆಸೆಗೆ ಅವೈಜ್ಞಾನಿಕವಾಗಿ ಕೆಲಸ ಮಾಡಿರುವುದನ್ನು ಸ್ಥಳೀಯ ನಿವಾಸಿಗಳು ಸಾಕ್ಷಿ ಸಹಿತ ಬಯಲು ಮಾಡಿದರು. ವಾರ್ಡ್‌ನ ಅಭಿವೃದ್ಧಿಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಹಾಗೂ ಅಂದಾಜುಪಟ್ಟಿ ತಯಾರಿಸುವ ಮುನ್ನ ಸರಿಯಾದ ಪ್ಲಾೃನ್ ಮಾಡದಿದ್ದರೆ ಏನೆಲ್ಲ ಅವಾಂತರವಾಗಲಿದೆ ಎನ್ನುವುದನ್ನು ಜನರೇ ತೋರಿಸಿದರು. ಈ ಮೂಲಕ ಅನುದಾನ ಬಿಡುಗಡೆಯಾದಾಗ ತಮ ಜತೆಗೆ ಗುತ್ತಿಗೆದಾರರಿಗೂ ಅನುಕೂಲವಾಗುವಂತಹ ಕೆಲಸ ಮಾಡಿರುವುದು ಕಣ್ಣಿಗೆ ಕಾಣಿಸಿತು.

ಅಂದರೆ ರಸ್ತೆಗಳನ್ನು ಅಭಿವೃದ್ಧಿಪಡಿಸುವ ಮುನ್ನ ಯುಜಿಡಿ, ಚರಂಡಿ, ಅಗತ್ಯ ಪೈಪ್‌ಲೈನ್‌ಗಳನ್ನು ಮಾಡಿಸುವುದನ್ನು ಬಿಟ್ಟು ಹಣ ಬಂದ ಕೂಡಲೇ ರಸ್ತೆಗಳನ್ನು ಮಾಡಿಸಲಾಗುತ್ತಿದೆ. ಇದಾದ ಕೆಲವೇ ದಿನದಲ್ಲಿ ಯುಜಿಡಿ, ಚರಂಡಿ ಮಾಡಲು ಗುಂಡಿ ತೆಗೆಯುತ್ತಿರುವುದರಿಂದ ಅನುದಾನ ವ್ಯರ್ಥವಾಗುತ್ತಿದೆ ಎನ್ನುವುದು ಕಂಡುಬಂತು. ಮಾತ್ರವಲ್ಲದೆ ಸ್ಥಳ ಪರಿಶೀಲನೆ ಮಾಡದೆ ಯೋಜನೆ ಅನುಷ್ಠಾನಗೊಳಿಸುವ ಪರಿಣಾಮ ಕೆಲವೆಡೆ ಚರಂಡಿಯಲ್ಲಿ ನೀರು ಹೊಗದಂತಾಗಿರುವುದು, ಹಲವೆಡೆ ಕುಡಿಯುವ ನೀರಿನ ಸಮಸ್ಯೆ, ಯುಜಿಡಿ ತೊಂದರೆಯಾಗಿರುವ ಅಂಶ ಬೆಳಕಿಗೆ ಬಂತು. ಈ ಹಿನ್ನೆಲೆಯಲ್ಲಿ ಶಾಸಕ ರವಿಕುಮಾರ್ ಗಣಿಗ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮಾತ್ರವಲ್ಲದೆ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ನಾಲ್ಕೂವರೆ ಕಿ.ಮೀ ನಾಲೆ ಅಭಿವೃದ್ಧಿ: ಮಂಡ್ಯ ನಗರ ವ್ಯಾಪ್ತಿಯ ಕಿರಂಗದೂರು ಗೇಟ್‌ನಿಂದ ಶ್ರೀನಿವಾಸಪುರ ಗೇಟ್‌ವರೆಗೆ ವಿಶ್ವೇಶ್ವರಯ್ಯ ನಾಲೆ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು.

8ನೇ ಸಂಪರ್ಕ ನಾಲೆ ಸುಮಾರು ನಾಲ್ಕೂವರೆ ಕಿ.ಮೀ ಇದೆ. ರಸ್ತೆ ಪಕ್ಕವೇ ನಾಲೆ ಇರುವುದರಿಂದ ಕೆಲವರು ಅದರೊಳಗೆ ತ್ಯಾಜ್ಯವನ್ನು ಹಾಕುತ್ತಿದ್ದಾರೆ. ಇದರಿಂದ ಸಮರ್ಪಕವಾಗಿ ನೀರು ಹರಿಯದಂತಾಗಿದೆ ಎಂದು ಸಾರ್ವಜನಿಕರು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ನಾಲೆಯನ್ನು ಸ್ಲಾೃಬ್ ಮೂಲಕ ಮುಚ್ಚಲಾಗುವುದು. ಇದರಿಂದ ನಗರದ ಹೊರವಲಯದಲ್ಲಿ ರಿಂಗ್‌ರೋಡ್‌ನಂತಾಗಿ ಸಾರ್ವಜನಿಕರ ಓಡಾಟಕ್ಕೂ ಅನುಕೂಲವಾಗಲಿದೆ. ಆದ್ದರಿಂದ ಯೋಜನೆ ಸಿದ್ಧಪಡಿಸಲಾಗುವುದು ಎಂದರು.

ವರ್ಗಾವಣೆ ಮಾಡಿಸಿಕೊಳ್ಳಿ: ಕಲ್ಲಹಳ್ಳಿ ವಿ.ವಿ ನಗರದಲ್ಲಿ ಜನಸಂದಣಿ ಹೆಚ್ಚಿರುವುದರಿಂದ ವಾಹನಗಳು ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಅವರು ಆಗೊಮ್ಮೆ ಹೀಗೊಮ್ಮೆ ಬರುತ್ತಾರೆಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಸ್ಪಂದಿಸಿದ ರವಿಕುಮಾರ್ ಗಣಿಗ, ಸ್ಥಳದಲ್ಲಿಯೇ ಇದ್ದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು ಹೋದರು. ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ವರ್ಗಾವಣೆ ಮಾಡಿಸಿಕೊಂಡು ಹೋಗಿ. ಈ ವಿಚಾರದಲ್ಲಿ ಮತ್ತೆ ದೂರು ಬಂದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಡ್ಡಿ ಮನ್ನಾದ ಭರವಸೆ: ನೀರಿನ ತೆರಿಗೆ ಸಂಬಂಧಿಸಿದಂತೆ ಬಡ್ಡಿ ಮನ್ನಾ ಮಾಡುವ ಸಂಬಂಧ ಕ್ರಮ ವಹಿಸಲಾಗಿದೆ ಎಂದು ಶಾಸಕ ರವಿಕುಮಾರ್ ಗಣಿಗ ಭರವಸೆ ನೀಡಿದರು. ವಿ.ವಿ ನಗರದಲ್ಲಿ ನೀರಿನ ತೆರಿಗೆ ಸಂಬಂಧ ಬಡ್ಡಿ ಹಾಗೂ 2019ರ ನಂತರ ವಿಧಿಸಿರುವ ಹೆಚ್ಚುವರಿ ಶುಲ್ಕವನ್ನು ಪಾವತಿಸಲು ಆರ್ಥಿಕ ತೊಂದರೆಯಾಗುತ್ತದೆ. ಈ ಬಗ್ಗೆ ಕ್ರಮ ವಹಿಸುವಂತೆ ಶಾಸಕರ ಬಳಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್, ನೀರಿನ ತೆರಿಗೆಯನ್ನು 282 ರೂನಿಂದ 225 ರೂಗೆ ಇಳಿಕೆ ಮಾಡಲಾಗಿದೆ. ಬಡ್ಡಿ ಮನ್ನಾ ಮಾಡಲು ಪ್ರಯತ್ನ ನಡೆದಿದೆ. ಇನ್ನು ಅಸಲಿ ಪಾವತಿಗೆ ಸಂಬಂಧಿಸಿದಂತೆ ಒನ್‌ಟೈಂ ಪಾವತಿ ಬಗ್ಗೆ ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು. ಇದೇ ಸಮಯದಲ್ಲಿ ವೃದ್ಧೆಯೊಬ್ಬರು ಅನಾರೋಗ್ಯ ಸಮಸ್ಯೆ ಬಗ್ಗೆ ಹೇಳಿಕೊಂಡಾಗ ಶಾಸಕರು ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.

ನೋಟಿಸ್ ಜಾರಿಗೆ ಸೂಚನೆ: ನಗರೋತ್ಥಾನ ಯೋಜನೆಯಡಿ ಕಾಮಗಾರಿ ಮಾಡುವ ಟೆಂಡರ್ ಪಡೆದು ಕೆಲಸ ಮಾಡದ ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ಶಾಸಕರು ಸೂಚನೆ ನೀಡಿದರು. ನಗರದ ಹಲವೆಡೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕೆಲಸ ಪಡೆದ ಗುತ್ತಿಗೆದಾರ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಿದ್ದಾರೆ. ಆದರೆ ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.