ಉಪ್ಪಿನಂಗಡಿ : ಇಳಂತಿಲ ಗ್ರಾಮದ ಹಿಂದು ರುದ್ರಭೂಮಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಅದನ್ನು ಬಳಕೆಗೆ ಯೋಗ್ಯವನ್ನಾಗಿಸಬೇಕೆಂದು ಪಂಚಾಯಿತಿ ಸದಸ್ಯರೊಬ್ಬರು ಒತ್ತಾಯಿಸಿದ ಘಟನೆ ಇಳಂತಿಲ ಗ್ರಾಪಂ ಸಾಮಾನ್ಯ ಸಭೆಯಲ್ಲಿ ನಡೆದಿದೆ.
ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಹಿರಿಯ ಸದಸ್ಯ ಇಸುಬು ಪೆದಮಲೆ, ಹಿಂದು ರುದ್ರಭೂಮಿಯಲ್ಲಿ ಮೂಲಸೌಕರ್ಯಗಳಿಲ್ಲದ ಕಾರಣ ಇಲ್ಲಿನ ಜನ ದೂರದ ಉಪ್ಪಿನಂಗಡಿಗೆ ಶವ ಸಂಸ್ಕಾರಕ್ಕಾಗಿ ಅಲೆದಾಡುವ ಸ್ಥಿತಿ ಇದೆ. ಸ್ಮಶಾನಕ್ಕೆ ಅಗತ್ಯ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಗ್ರಾಮದ ಅಂಬೊಟ್ಟು ಎಂಬಲ್ಲಿ ಗ್ರಾಪಂಗೆ ಸೇರಿದ ಭೂಮಿಯನ್ನು ಖಾಸಗಿ ವ್ಯಕ್ತಿಯೋರ್ವರು ಅತಿಕ್ರಮಿಸಿದ್ದಾರೆಂದು ಆರೋಪಿಸಿದ ಇಸುಬು, ಅತಿಕ್ರಮಣವನ್ನು ತೆರವುಗೊಳಿಸಬೇಕು. ಇಲ್ಲವಾದರೆ ತಾನೇ ತೆರವಿಗೆ ಮುಂದಾಗುವೆನೆಂದು ಎಚ್ಚರಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷರು, ಯಾವುದೇ ಸದಸ್ಯರು ಕಾನೂನು ಕೈಗೆತ್ತಿಕೊಳ್ಳುವ ದುಡುಕು ಪ್ರದರ್ಶಿಸಬಾರದು. ಪಿಡಿಒ ಸಹಿತ ಆ ಭಾಗದ ಸದಸ್ಯರು ಜತೆಗೂಡಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳೋಣ ಎಂದರು.
ಕಡವಿನಬಾಗಿಲು ಎಂಬಲ್ಲಿ ಚರಂಡಿ ಅಭಿವೃದ್ಧಿಗೆ ಅನುದಾನ ಒದಗಿಸಲು ಆಗ್ರಹ, ಗ್ರಾಮದಲ್ಲಿ ಏತನೀರಾವರಿ ಯೋಜನೆಯ ಗುತ್ತಿಗೆದಾರರು ರಸ್ತೆ ಅಗೆದು ಹಾಕಿ ಸಮಸ್ಯೆ ತಂದೊಡ್ಡಿರುವುದನ್ನು ಸರಿಪಡಿಸಲು ಕ್ರಮ, ಮೊಬೈಲ್ ಟವರ್‌ಗಳಿಂದ ಅಗತ್ಯ ತೆರಿಗೆ ವಸೂಲಾತಿಗೆ ಕ್ರಮ, ಕಡವಿನಬಾಗಿಲು ಮತ್ತು ಜೋಗಿಬೆಟ್ಟು ಪ್ರದೇಶಗಳಿಗೆ ಕೊಳವೆಬಾವಿಯ ಮಂಜೂರಾತಿಗೆ ಒತ್ತಾಯ, ಸಾರ್ವಜನಿಕ ಚರಂಡಿಗೆ ಹಾನಿ ಮಾಡಿದವರ ವಿರುದ್ಧ ಕ್ರಮ, ಕಾಲುದಾರಿಯನ್ನು ಅತಿಕ್ರಮಿಸಿದರ ವಿರುದ್ಧ ಕ್ರಮ, ದಾರಿದೀಪ ಗುತ್ತಿಗೆದಾರರಿಗೆ ಬಿಲ್ ಪಾವತಿಸಲು ಕ್ರಮ ಮೊದಲಾದ ವಿಚಾರ ಸಭೆಯಲ್ಲಿ ಪ್ರಸ್ತಾಪವಾಯಿತು.
ಉಪಾಧ್ಯಕ್ಷೆ ಸವಿತಾ, ಸದಸ್ಯರಾದ ಚಂದ್ರಿಕಾ ಟ್, ಸಿದ್ದೀಕ್, ವಿಜಯ ಕುಮಾರ್, ವಸಂತ ಶೆಟ್ಟಿ, ರೇಖಾ, ಉಷಾ ಯಂ,ರಮೇಶ, ನಿಶ್ರಿತಾ, ಜಾನಕಿ ,ಉಷಾ ಎಂ ಎನ್ ಉಪಸ್ಥಿತರಿದ್ದರು. ಪ್ರಭಾರ ಪಿಡಿಒ ಸುಮಯ್ಯ ಸ್ವಾಗತಿಸಿ ವರದಿ ಮಂಡಿಸಿದರು. ಕಾರ‌್ಯದರ್ಶಿ ವಿಜಯ ಕಾರ‌್ಯಕ್ರಮ ನಿರೂಪಿಸಿದರು.