ಇಳಕಲ್ಲ(ಗ್ರಾ): ಕಳೆದ ಒಂದು ದಶಕದಲ್ಲಿ ನಗರದಲ್ಲಿ ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳು ಸಿಗುತ್ತಿದ್ದು, ನಗರ ಹಾಗೂ ಸುತ್ತಮುತ್ತಲಿನ ಜನತೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭಾರತೀಯ ವೈದ್ಯಕೀಯ ಸಂಸ್ಥೆ ಅಧ್ಯಕ್ಷ ಡಾ.ವಿಠ್ಠಲ ಶ್ಯಾವಿ ಹೇಳಿದರು.
ಇಲ್ಲಿಯ ರಾಮಾನುಜಾಚಾರ್ಯ ಫೌಂಡೇಷನ್ ಮತ್ತು ಬೆಂಗಳೂರಿನ ಫೋರ್ಟಿಸ್ ಸಹಯೋಗದಲ್ಲಿ ಧಲಸ್ಸೀಮಿಯಾ ಪೀಡಿತ ಮಕ್ಕಳ ಅಸ್ಥಿಮಜ್ಜೆ ಕಸಿ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ತಜ್ಞ ವೈದ್ಯರು ಇಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಧಲಸ್ಸೀಮಿಯಾ ಎಂಬಂತಹ ಭಯಾನಕ ರೋಗಕ್ಕೆ ಇಲ್ಲಿ ವೈದ್ಯಕೀಯ ಸೌಲಭ್ಯ ಸಿಗುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು.
ಬಾಗಲಕೋಟೆ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನ್ ಆನಂದ ಜಿಗಜಿನ್ನಿ ಮಾತನಾಡಿ, ರಕ್ತದ ಅವಶ್ಯಕತೆ ಇದ್ದಾಗ ರೆಡ್‌ಕ್ರಾಸ್ ಸಂಸ್ಥೆಯಿಂದ ಈ ಫೌಂಡೇಷನ್‌ಗೆ ನೀಡಲಾಗುವುದು ಎಂದು ಭರವಸೆ ನೀಡಿದರು. ಬೆಂಗಳೂರಿನ ರವಿ ಜೋಶಿ, ಬಾಗಲಕೋಟೆಯ ಡಾ.ಭುವನೇಶ್ವರಿ ಯಳಮೇಲಿ ಮಾತನಾಡಿದರು.
ನಗರಸಭೆ ಅಧ್ಯಕ್ಷೆ ಶೋಭಾ ಆಮದಿಹಾಳ, ಇಳಕಲ್ಲ ಕೋ ಆಪ್‌ರೇಟಿವ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮಣ ಗುರಂ, ಮಾಹೇಶ್ವರಿ ಸಮಾಜದ ಅಧ್ಯಕ್ಷ ರಾಮಾವತಾರ ಲಾಹೋಟಿ, ಸರ್ವವಿಜಯ ಸೇವಾ ಸಂಸ್ಥೆ ಗೌರವಾಧ್ಯಕ್ಷ ರಾಜು ಬೋರಾ, ಜುಗಲ್‌ಕಿಶೋರ ಕರವಾ ಆಗಮಿಸಿದ್ದರು.
ಫೌಂಡೇಷನ್ ಅಧ್ಯಕ್ಷ ಗೋಕುಲ ದರಕ ಅಧ್ಯಕ್ಷತೆ ವಹಿಸಿದ್ದರು. ಮೋಹನ ಕಂಬದ ಸ್ವಾಗತಿಸಿದರು. ಗಿರೀಶ ಪದಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ಪವನ ದರಕ, ಡಾ.ರಶ್ಮಿ ದರಕ ಪರಿಚಯಿಸಿದರು. ರಮಾಕಾಂತ ದರಕ ವಂದಿಸಿದರು. ಆಡಳಿತಾಧಿಕಾರಿ ವಿಜಯಕುಮಾರ ಕುಲಕರ್ಣಿ ನಿರೂಪಿಸಿದರು.