ಜಿಲ್ಲೆ

ಭಾವೈಕ್ಯ ಬ್ರಹ್ಮ ಸಿನಿಮಾ ಚಿತ್ರೀಕರಣ ಆರಂಭ

ಇಳಕಲ್ಲ: ಸಮೀಪದ ಸುಕ್ಷೇತ್ರ ಅಂಕಲಿಮಠದಲ್ಲಿ ಅಂಜನಾದ್ರಿ ಸಿನಿ ಪ್ರೋಡಕ್ಷನ್‌ನಡಿ ನಿರ್ಮಾಣವಾಗುತ್ತಿರುವ ನಿರುಪಾದೀಶ್ವರ ಶರಣರ ಜೀವನ ಚರಿತ್ರೆ ಆಧಾರಿತ ಭಾವೈಕ್ಯ ಬ್ರಹ್ಮ ಚಲನಚಿತ್ರದ ಚಿತ್ರೀಕರಣದ ಮುಹೂರ್ತ ಸಮಾರಂಭ ಈಚೆಗೆ ಜರುಗಿತು.

ಅಂಕಲಿಮಠದ ವೀರಭದ್ರ ಸ್ವಾಮಿಗಳು ಕ್ಯಾಮರಾ ಸ್ಟಾರ್ಟ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಚಿತ್ರೀಕರಣ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.

ವಿಜಯಕುಮಾರ ಗದ್ದಿ ನಿರ್ಮಿಸುತ್ತಿರುವ ಚಿತ್ರಕ್ಕೆ ಶಿವಶರಣ ಸುಗ್ನಳ್ಳಿ ನಿರ್ದೇಶನವಿದೆ. ಲಿಂಗಸುಗೂರು ತಾಲೂಕಿನ ಅಮರೇಶ್ವರ ರಂಗಭೂಮಿಯ ಕಲಾವಿದರ ಸಂಘದ ಅಧ್ಯಕ್ಷ ನಿರುಪಾದಿ ಕವಿಗಳು ಕತೆ, ಸಂಭಾಷಣೆ ರಚಿಸಿದ್ದಾರೆ. ಯುವ ಸಂಗೀತ ನಿರ್ದೇಶಕ ಅನುರಾಗ ಗದ್ದಿ ಸಂಗೀತ, ಕೆ.ಕಲ್ಯಾಣ, ಡಾ.ವಿ.ನಾಗೇಂದ್ರಪ್ರಸಾದ ಸಾಹಿತ್ಯ, ಪ್ರಕಾಶ ಕಮ್ಮಾರ ಮೇಕಪ್, ಸಿದ್ಧಾರ್ಥ ಭೈರವ್ ಛಾಯಾಗ್ರಹಣ ಚಿತ್ರಕ್ಕಿದೆ.

ಮಾಸ್ಟರ್ ಆನಂದ ನಿರುಪಾದೀಶ್ವರರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಬ್ಯಾಂಕ್ ಜನಾರ್ದನ, ನಯನ, ಕೆ. ಗಣೇಶರಾವ್, ಜ್ಯೋತಿ ಮುರೂರ, ರೇಖಾ, ಅಂಜನಪ್ಪ ಮೊದಲಾದವರ ಜತೆಗೆ ಉತ್ತರ ಕರ್ನಾಟಕದ ಕಲಾವಿದರು ಅಭಿನಯಿಸಲಿದ್ದಾರೆ.

EndFragment