ಜಿಲ್ಲೆ

ಕೃಷಿ ಭೂಮಿ ಉಳಿಸಲು ಜನಜಾಗೃತಿ ಹೋರಾಟ

Mangaluru - Hariprasad Rai


ಮಂಗಳೂರು : ಉಡುಪಿ -ಕಾಸರಗೋಡು 400 ಕೆವಿ ಟ್ರಾನ್ಸ್‌ಮಿಷನ್ ಲೈನ್ (ಯುಕೆಟಿಎಲ್) ಯೋಜನೆಗಾಗಿ ಈಗ ಗುರುತಿಸಲಾದ ಪ್ರದೇಶದಲ್ಲಿರುವ ರೈತರು ತಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ನೀಡುವುದಿಲ್ಲ. ಸಾವಿರಾರು ಎಕರೆ
ಕೃಷಿ ಭೂಮಿಯನ್ನು ಉಳಿಸಲು ಶೀಘ್ರದಲ್ಲೇ ಜನ ಜಾಗೃತಿ ಹಮ್ಮಿಕೊಳ್ಳಲಾಗುವುದು. ಪಾದಯಾತ್ರೆ, ಪ್ರಭಾತ ಫೇರಿ, ಉಡುಪಿಯಿಂದ ಕೇರಳದ ಗಡಿಭಾಗದವರೆಗೆ ದ್ವಿಚಕ್ರ ರ‌್ಯಾಲಿ ನಡೆಸಲು ಸಮಸ್ತ ಯುಕೆಟಿಎಲ್ ಯೋಜನೆ ವಿರೋಧಿ ಹೋರಾಟ ಸಮಿತಿಗಳ ಒಕ್ಕೂಟ ನಿರ್ಧರಿಸಿದೆ ಎಂದು ಹೋರಾಟ ಸಮಿತಿಯ ಪ್ರಮುಖರಾದ ಚಂದ್ರಹಾಸ ಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕೂವರೆ ವರ್ಷಗಳ ಹಿಂದೆ ವಿಟ್ಲ ಭಾಗದ ರೈತರು ಮೊದಲ ಬಾರಿಗೆ ಈ ಯೋಜನೆ ವಿರೋಧಿಸಿ ಹೋರಾಟ ಸಮಿತಿ ರಚಿಸಿ
ಪ್ರತಿಭಟನೆ ವ್ಯಕ್ತ ಪಡಿಸಿದ್ದರು. ಈಗ ಕರ್ನಾಟಕ ರಾಜ್ಯ ರೈತ ಸಂಘವೂ ಸೇರಿದಂತೆ ಉಭಯ ಜಿಲ್ಲೆಗಳ ರೈತ ಪರ ಸಂಘಟನೆಗಳು, ಪರಿಸರ ಪ್ರೇಮಿ ಹಾಗೂ ಸಾಮಾಜಿಕ ನ್ಯಾಯ ಪರ ಸಂಘಟನೆಗಳ ಪ್ರತಿನಿಧಿಗಳು ಸೇರಿಕೊಂಡು ಸಮಸ್ತ ಯುಕೆಟಿಎಲ್ ಹೋರಾಟ ಸಮಿತಿಗಳ ಒಕ್ಕೂಟ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ವಿದ್ಯುತ್ ಸಂಪರ್ಕ ಜಾಲಕ್ಕೆ ಯಾವುದೇ ವಿರೋಧವಿಲ್ಲ. ಆದರೆ ಸಮೃದ್ಧವಾಗಿರುವ ಕೃಷಿ ಭೂಮಿಯನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಫಲವತ್ತಾದ ಕೃಷಿಭೂಮಿಯನ್ನು ನಾಶ ಪಡಿಸುವುದನ್ನು ನಾವು ವಿರೋಧಿಸುತ್ತಿದ್ದೇವೆ. ಈ ಯೋಜನೆಗೆ ಉಭಯ ಜಿಲ್ಲೆಗಳ 1150 ಎಕರೆ ಕೃಷಿ ಭೂಮಿ ಬಲಿಯಾಗುತ್ತದೆ. ಜತೆಗೆ ಸುಮಾರು 2300 ಎಕರೆಯಷ್ಟು ಜಮೀನು ಕಟ್ಟಡ, ಮನೆ, ಮನೆ, ಶೆಡ್, ಗೋದಾಮು, ಹಟ್ಟಿ, ಮಠ ಮಂದಿರ ಏನನ್ನೂ ಕಟ್ಟಲಾಗದೆ, ವಾಸಿಸಲೂ ಅಯೋಗ್ಯವಾಗಲಿದೆ. ಅಂದಾಜು 1,65,000 ಅಡಕೆ ಮರ, 7,800 ತೆಂಗಿನ ಮರ, 1,20, 000 ಕರಿಮೆಣಸಿನ ಬಳ್ಳಿ, 4500 ರಬ್ಬರ್ ಮರ, 2500 ಹಲಸು, 5000 ಸಾಗುವಾನಿ, 2800 ಮಾವು, 4500ರಷ್ಟು ಬಲಿತ ಕಾಡು ಮರಗಳು ಧರೆಗೆ ಉರುಳಲಿವೆ. 328 ಮನೆಗಳು, 26 ದೈವಸ್ಥಾನಗಳು, 8 ಮಸೀದಿ, 16 ದೇವಸ್ಥಾನ, 14 ಶಾಲೆಗಳು, 3 ಸೆಮಿನರಿಗಳು ಈ ಕಾರಿಡಾರ್‌ನ ಸಂಪರ್ಕಕ್ಕೆ ಬರಲಿವೆ ಎಂದು ಅವರು ವಿವರ ನೀಡಿದರು.
ನಾಲ್ಕೂವರೆ ವರ್ಷಗಳಲ್ಲಿ ಶೇ. 1ರಷ್ಟು ಯೋಜನಾ ಸಂತ್ರಸ್ತರಿಗೂ ಕ್ರಮಬದ್ಧ ನೋಟೀಸು ನೀಡಿಲ್ಲ. ಕಾರಿಡಾರ್‌ನಲ್ಲಿ ಬರುವ ಶೇ. 70ರಷ್ಟು ಜನರಿಗೆ ಈ ಯೋಜನೆಯ ಬಗ್ಗೆ ಅರಿವೇ ಇಲ್ಲ. ಯೋಜನೆ ಅನುಷ್ಠಾನವಾಗಬೇಕಾದರೆ ಶೇ. 85ರಷ್ಟು ಬಾಧಿತ ಕ್ಷೇತ್ರದ ಜನರ ಸಮ್ಮತಿ ಅಗತ್ಯ. ಆದರೆ ಇಲ್ಲಿ ಯೋಜನೆಗೆ ಶೇ. 97ರಷ್ಟು ಜನರ ವಿರೋಧವಿದೆ.ಗ್ರಾಮ ಸಭೆಗಳಲ್ಲಿಯೂ ಈ ಯೋಜನೆ ವಿರುದ್ಧ ಠರಾವು ಮಂಜೂರಾಗಿದೆ. ಜನಪ್ರತಿನಿಧಿಗಳು ಪ್ರತಿಕ್ರಿಯೆ ನೀಡದಿದ್ದರೆ ಅವರ ಕಚೇರಿ ಹಾಗೂ ನಿವಾಸಗಳ ಎದುರು ಪ್ರತಿಭಟನೆ ನಡೆಸುವುದಾಗಿ ರೈತ ಮುಖಂಡ ಶ್ರೀಧರ ಶೆಟ್ಟಿ ತಿಳಿಸಿದರು.
ಒಕ್ಕೂಟದ ಪ್ರಮುಖರಾದ ರಾಜೀವ ಗೌಡ, ದಯಾನಂದ ಶೆಟ್ಟಿ, ಉದಯ ಕುಮಾರ್ ಜೈನ್, ಅಲ್ಫೋನ್ಸ್ ಡಿಸೋಜಾ ಉಪಸ್ಥಿತರಿದ್ದರು.