ಜಿಲ್ಲೆ

ಐಕಳ ಮನೆ ಕಳವು ಪ್ರಕರಣ ಇನ್ನೋರ್ವ ಆರೋಪಿ ಬಂಧನ

ಹರೀಶ ಎಂ.

ಮಂಗಳೂರು: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಐಕಳದಲ್ಲಿ ನಡೆದ ಮನೆ ಕಳವು ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


ಬೊಂಡೆಂತಿಲ ಗ್ರಾಮದ ತಾರಿಗುಡ್ಡೆ ಸೈಟ್ ಹೌಸ್ ಮಹಮ್ಮದ್ ಶರೀಫ್ (40) ಬಂಧಿತ ಆರೋಪಿ. ಈತ ಕಳವು ಮಾಡಲು ಮನೆಯನ್ನು ತೋರಿಸಿ ಕೊಟ್ಟು ಸಹಕಾರ ನೀಡಿದ್ದ. ಈತನಿಂದ ಚಿನ್ನದ ಪೆಂಡೆಂಟ್ ಹಾಗೂ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವಾರು ಮಂದಿ ಆರೋಪಿಗಳು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.


ಜನವರಿ 15 ಸಂಜೆ 6.30ರಿಂದ 16 ಬೆಳಗ್ಗೆ 9 ಗಂಟೆ ನಡುವೆ ಮಂಗಳೂರು ತಾಲೂಕು ತಾಳಿಪ್ಪಾಡಿ ಗ್ರಾಮದ ಗುತ್ತಕಾಡು ಎಂಬಲ್ಲಿರುವ ಐಕಳ ಹರೀಶ್ ಶೆಟ್ಟಿ ಎಂಬವರ ಚಂದ್ರಿಕಾ ಎಂಬ ಹೆಸರಿನ ಮನೆಯ ಎದುರಿನ ಬಾಗಿಲಿನ ಲಾಕನ್ನು ಯಾರೋ ಕಳ್ಳರು ಮುರಿದು ಮನೆಯಲ್ಲಿದ್ದ ಚಿನ್ನಾಭರಣ, ಬೆಳ್ಳಿಯ ಆಭರಣ ಹಾಗೂ ನಗದು ಹಣವನ್ನು ಕಳವುಗೈದಿದ್ದರು. ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದಲ್ಲಿ ತನಿಖೆ ಕೈಗೊಂಡ ಸಿಸಿಬಿ ಎಸಿಪಿ ಪಿ.ಎ. ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಆರೋಪಿಗಳನ್ನು ಬಂಧಿಸಿ, 56,50,000 ರೂ. ಚಿನ್ನಾಭರಣಗಳು, ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ಈಗಾಗಲೇ ವಶಪಡಿಸಿಕೊಂಡಿದ್ದಾರೆ.