ಜಿಲ್ಲೆ

ಪೊಲೀಸ್ ಅಧಿಕಾರಿಗಳಿಗೆ ಐಜಿಪಿ ಡಾ.ತ್ಯಾಗರಾಜನ್ ಕ್ಲಾಸ್

ಹಾವೇರಿ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆಗೊಂಡು ಜಿಲ್ಲೆಯಲ್ಲಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲೆಯ ಪೊಲೀಸ್ ಅಧಿಕಾರಿಗಳಿಗೆ ದಾವಣಗೆರೆ ಪೂರ್ವ ವಲಯ ಐಜಿಪಿ ಡಾ.ಕೆ.ತ್ಯಾಗರಾಜನ್ ಕ್ಲಾಸ್ ತೆಗೆದುಕೊಂಡರು. ಚುನಾವಣೆ ಹಿನ್ನೆಲೆಯಲ್ಲಿ ಎಎಸ್‌ಪಿ ಸೇರಿದಂತೆ ಅನೇಕ ಪೊಲೀಸ್ ಅಧಿಕಾರಿಗಳು ವರ್ಗಾವಣೆಗೊಂಡಿದ್ದಾರೆ. ಹೊಸದಾಗಿ ಅಧಿಕಾರಿಗಳು ಜಿಲ್ಲೆಗೆ ಆಗಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಗೆ ಆಗಮಿಸಿದ್ದ ಐಜಿಪಿ ಡಾ.ತ್ಯಾಗರಾಜನ್ ಅವರು ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿಯಲ್ಲಿ ಶುಕ್ರವಾರ ಅಧಿಕಾರಿಗಳ ಸಭೆ ನಡೆಸಿದರು. ಸಭೆಯಲ್ಲಿ ಅಧಿಕಾರಿಗಳಿಗೆ ಅನೇಕ ಸಲಹೆ, ಸೂಚನೆಗಳನ್ನು ನೀಡಿದರು. ಚುನಾವನೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುವ ಕುರಿತು ಕೆಲ ಖಡಕ್ ಸೂಚನೆಗಳನ್ನು ನೀಡಿದ್ದಾರೆ ಎಂದು ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಎಎಸ್‌ಪಿ ಗೋಪಾಲ, ಡಿಆರ್ ಡಿವೈಎಸ್‌ಪಿ ಪ್ರಕಾಶ, ಡಿವೈಎಸ್‌ಪಿಗಳಾದ ಶಿವಾನಂದ ಚಲವಾದಿ, ಎನ್.ಎಸ್.ಪಾಟೀಲ, ವಿವಿಧ ಠಾಣೆಗಳ ಸಿಪಿಐಗಳು, ಪಿಎಸ್‌ಐಗಳು, ಮತ್ತಿತರರು ಪಾಲ್ಗೊಂಡಿದ್ದರು.