ಜಿಲ್ಲೆ

ಅಂಕ ಗಳಿಸುವ ಭರದಲ್ಲಿ ಅಹಂಕಾರ ಸಲ್ಲದು: ಡಾ.ನಿರ್ಮಲಾನಂದನಾಥ ಸ್ವಾಮೀಜಿ

ಚಿಕ್ಕಮಗಳೂರು: ಉತ್ತಮ ಅಂಕ ಗಳಿಸಲು ಕಾರಣರಾಗಿರುವ ವಿದ್ಯಾರ್ಥಿಯೊಳಗೆ ಅರಳಿರುವ ಶಕ್ತಿಯನ್ನು ಇಂದು ಗೌರವಿಸಲಾಗುತ್ತಿದೆ. ಆದರೆ ಅಂಕ ಗಳಿಸುವ ಭರದಲ್ಲಿ ಅಹಂಕಾರ ಬರಬಾರದು ಎಂದು ಆದಿಚುಂಚನಗಿರಿ ಸಂಸ್ಥಾನದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ನಗರದ ಎಐಟಿ ಕಾಲೇಜು ಸಭಾಂಗಣದಲ್ಲಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಜಿಲ್ಲೆಯ ಶಾಲಾ ಕಾಲೇಜುಗಳ 2019-20ನೆಯ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಅಂಕದಿಂದ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬುಧವಾರ ಏರ್ಪಡಿಸಿದ್ದ ವಾರ್ಷಿಕ ಶೈಕ್ಷಣಿಕ ಸಮಾಗಮದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಪ್ರತಿಕ್ಷಣದ ಸದ್ಬಳಕೆ ಅಗತ್ಯ

ಶ್ರಮ, ಏಕಾಗ್ರತೆ ಜತೆಗೆ ಶಿಕ್ಷಕರ ಮೇಲಿನ ಭಕ್ತಿ ಮತ್ತು ಗೌರವದ ಫಲ ಅತ್ಯುತ್ತಮ ಅಂಕ. ಉತ್ತುಂಗಕ್ಕೆ ತಲುಪಿದ ಮೇಲೆ ಜವಾಬ್ದಾರಿ ಅಧಿಕವಾಗುತ್ತದೆ. ಒಂದು ದಿನಕ್ಕೆ ಸಾಧನೆ ಮುಗಿಯುವುದಿಲ್ಲ. ಪ್ರತಿಕ್ಷಣವೂ ಪ್ರತಿದಿನವನ್ನೂ ವಿದ್ಯಾರ್ಥಿ ಸದ್ಬಳಕೆ ಮಾಡಿಕೊಳ್ಳಬೇಕು. ಹದಿಹರೆಯದ ವಯಸ್ಸಿನಲ್ಲಿ ಮನಸು ನಿಗ್ರಹಿಸಿಕೊಂಡು ನಿರಂತರ ಅಭ್ಯಾಸದ ಮೂಲಕ ಜ್ಞಾನ ಸಂಪಾದನೆಯಲ್ಲಿ ಏಳೆಂಟು ವರ್ಷ ತೊಡಗಿಸಿಕೊಂಡರೆ ಮುಂದಿನ ಬದುಕು ಸುಂದರವಾಗಿ ನಳನಳಿಸುತ್ತದೆ ಎಂದರು.

ಒಳಿತು ಒಳತುಂಬಿಕೊಳ್ಳುವುದೇ ಶಿಕ್ಷಣ

ಮನಸ್ಸು ಮಲ್ಲಿಗೆಯಂತಿದ್ದರೆ ಮಾತು ಪರಿಮಳದಿಂದ ಕೂಡಿರುತ್ತದೆ. ಮನಸ್ಸು ಮಲ್ಲಿಗೆಯಾಗಿಸುವುದೇ ವಿದ್ಯೆಯ ಆಶಯ. ಒಳಿತನ್ನು ಒಳಗೆ ತುಂಬಿಕೊಳ್ಳುವುದೇ ಶಿಕ್ಷಣ. ಶಕ್ತಿ ಸಂಪಾದಿಸಿಕೊಂಡವರನ್ನು ಜಗತ್ತು ಗೌರವಿಸುತ್ತದೆ. ಯಶಸ್ಸಿನ ಅಹಂ ತಲೆಗೆ ಹೊಕ್ಕರೆ ಭವಿಷ್ಯ ಕತ್ತಲಾಗುತ್ತದೆ. ಜ್ಞಾನವೆಂಬುದು ಮನಸ್ಸಿನ ಉತ್ಪನ್ನ ಎನ್ನುವುದಕ್ಕಿಂತ ಬುದ್ಧಿಯ ಬೆಳಕಿನಲ್ಲಿ ಅರಳಿರುವುದೆಂಬುದೇ ಸೂಕ್ತ. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಾಲಾ-ಕಾಲೇಜುಗಳಲ್ಲಿ ಒಟ್ಟಾರೆ ಸುಮಾರು 9,800 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನಲ್ಲಿ ಪರೀಕ್ಷೆ ಬರೆದಿದ್ದು, ಅದರಲ್ಲಿ 4 ಸಾವಿರ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆ ಹೊಂದಿದ್ದಾರೆ. ಶ್ರೀಕ್ಷೇತ್ರದಲ್ಲಿ ಅವರನ್ನು ಅಭಿನಂದಿಸಿ ಪರಸ್ಪರ ಪರಿಚಯಿಸುವ ಕಾರ್ಯಕ್ರಮ ನಡೆಸುತ್ತಿದ್ದು ಈ ಬಾರಿ ಕರೊನಾದಿಂದಾಗಿ ಜಿಲ್ಲಾಮಟ್ಟದಲ್ಲಿ ಆಯೋಜಿಸಲಾಗಿದೆ ಎಂದರು.

ವಿನಯ ವಿದ್ಯಾವಂತನ ಲಕ್ಷಣ

ಕಂದಾಯ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಮಾತನಾಡಿ ಪರೀಕ್ಷೆಯಲ್ಲಿ ಅಂಕ ಗಳಿಸುವ ಸ್ಪರ್ಧೆಗಿಂತ ಉತ್ತಮ ಭಾವ-ಗುಣದೊಂದಿಗೆ ಸ್ಪರ್ಧೆ ಮಾಡಬೇಕು. ವಿನಯ ವಿದ್ಯಾವಂತನ ಲಕ್ಷಣ. ಕೀಳರಿಮೆ ತೊರೆದು, ಬುದ್ಧಿ, ಮನಸ್ಸು ಸ್ಥಿಮಿತದಲ್ಲಿಟ್ಟುಕೊಂಡು ಸಮನ್ವಯ ಸಾಧಿಸುವುದು ಮುಖ್ಯ ಜಾಗತಿಕ ಸ್ಪರ್ಧೆಯಲ್ಲಿ ಸಾಮರ್ಥ್ಯ ಪ್ರಮುಖವಾಗಿದ್ದು, ಅಂಕಗಳೆ ಸದಾ ನಮ್ಮನ್ನು ಕಾಪಾಡುತ್ತವೆ ಎಂಬ ಭ್ರಮೆ ಬೇಡ ಎಂದು ಸಲಹೆ ನೀಡಿದರು.

ಶಿಕ್ಷಣ ತಜ್ಞ ಎಂ.ಎನ್.ಷಡಕ್ಷರಿ, ಡಿಡಿಪಿಯು ಕೆ.ನಾಗರಾಜ್ ಮತ್ತು ಡಿಡಿಪಿಐ ಬಿ.ವಿ.ಮಲ್ಲೇಶಪ್ಪ ಮಾತನಾಡಿದರು. ವಿದ್ಯಾರ್ಥಿಗಳಾದ ಸುಜನಾ ಮತ್ತು ಪ್ರೀತಮ್ ತಮ್ಮ ಸಾಧನೆಗೆ ಸಂಸ್ಥೆಯ ಮಾರ್ಗದರ್ಶನ ಪ್ರೇರಕ ಎಂದರು. ಜಿಲ್ಲೆಯ 231 ವಿದ್ಯಾರ್ಥಿಗಳನ್ನು ಸ್ಮರಣಿಕೆ, ನಗದು ಬಹುಮಾನ, ಸ್ಮರಣ ಸಂಚಿಕೆ ಜತೆಗೆ ನೀಡಿ ಪುರಸ್ಕರಿಸಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಮೋಹಿನಿ ಸಿದ್ದೇಗೌಡ ಮತ್ತು ಎಂ.ಎನ್.ಷಡಕ್ಷರಿ ಹಾಗೂ ನಾಥ ಸಂಸ್ಕøತಿಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಒ.ಎಲ್.ಚಂದ್ರೇಗೌಡ ಅವರನ್ನು ಸ್ವಾಮೀಜಿ ಸನ್ಮಾನಿಸಿದರು.

ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠಾಧ್ಯಕ್ಷ ಶ್ರೀ ಗುಣನಾಥ ಸ್ವಾಮೀಜಿ, ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ, ಮಂಗಳೂರು ಶಾಖಾ ಮಠಾಧ್ಯಕ್ಷ ಶ್ರೀ ಧರ್ಮಪಾಲ ಸ್ವಾಮೀಜಿ, ಎಐಟಿ ವಿವಿಯ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಎಐಟಿ ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಟ್ರಸ್ಟ್ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜೇಗೌಡ, ಪಿ.ಯು.ಕಾಲೇಜು ಪ್ರಾಚಾರ್ಯ ಸುರೇಂದ್ರ, ನಾಗೇಶ್ ಮತ್ತಿತರರು ವೇದಿಕೆಯಲ್ಲಿದ್ದರು.