ಜಿಲ್ಲೆ

ಹೊಸತು ಕಲಿಕೆಯ ಉತ್ಸಾಹ ತುಂಬಲಿ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ತ್ವರಿತವಾಗಿ ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ನಿರಂತರ ಕಲಿಕೆಯ ಚಾಣಾಕ್ಷತನ ಬೆಳೆಸಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿ ಹೊಸತನ್ನು ಕಲಿಯಲು ಉತ್ಸಾಹ ತುಂಬಬೇಕು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ)ಯ ಸಲಹೆಗಾರ್ತಿ ಡಾ. ಮಮತಾ ಅಗರ್ವಾಲ್ ಹೇಳಿದರು.

ನಗರದಲ್ಲಿ ಶುಕ್ರವಾರ ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯ ಆಶ್ರಯದಲ್ಲಿ ಆಯೋಜಿಸಿದ್ದ ಇನ್​ಸ್ಟಿಟ್ಯೂಷನ್ಸ್ ಇನ್ನೊವೇಷನ್ ಕೌನ್ಸಿಲ್ (ಐಐಸಿ)ನ 16ನೇ ಪ್ರಾದೇಶಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) 2023ರ ವರದಿ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ ವಿಭಿನ್ನ ಕೌಶಲದ 150 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದೇ ವೇಳೆ ಮುಂದುವರಿದ ತಂತ್ರಜ್ಞಾನದ ಪರಿಣಾಮವಾಗಿ 75 ಮಿಲಿಯನ್ ಉದ್ಯೋಗಗಳು ನಷ್ಟವಾಗಲಿವೆ ಎಂದು ಹೇಳಿದೆ. ಹಾಗಾಗಿ ಹೊಸ ಕೌಶಲಗಳನ್ನು ಕಲಿತುಕೊಂಡು ಜಾಗತಿಕ ಬದಲಾವಣೆಗೆ ಹೊಂದಿಕೊಳ್ಳಬೇಕು ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಇನ್ನೊವೇಶನ್ ಸೆಲ್​ನ ಸಹಾಯಕ ನಿರ್ದೇಶಕ (ನಾವೀನ್ಯ) ದಿಪನ್ ಸಾಹು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉದ್ಯಮಶೀಲ ಗುಣಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಐಐಸಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ದಿನಗಳಲ್ಲಿ ಗರಿಷ್ಠ ಮಟ್ಟದ ಆವಿಷ್ಕಾರಗಳು ಶಿಕ್ಷಣ ಸಂಸ್ಥೆಗಳಿಂದಲೇ ಹೊರ ಬರಲಿವೆ. ಆರಂಭಗೊಂಡ 2-3 ವರ್ಷಗಳಲ್ಲಿ ಐಐಸಿಗಳು ಸರ್ಕಾರದ ನೆರವಿಲ್ಲದೆ ಮುಂದುವರಿಯಲಿದೆ ಎಂಬ ವಿಶ್ವಾಸ ಮೂಡಿದೆ ಎಂದರು.

ಕೆಎಲ್​ಇ ತಾಂತ್ರಿಕ ವಿವಿ ಕುಲಪತಿ ಡಾ. ಅಶೋಕ ಶೆಟ್ಟರ್ ಮಾತನಾಡಿ, ದೇಶದ 60 ಸಾವಿರ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 4 ಕೋಟಿ ವಿದ್ಯಾರ್ಥಿಗಳಿಗೆ ಸರ್ಕಾರವೇ ಎಲ್ಲವನ್ನು ಮಾಡಲು ಸಾಧ್ಯವಿಲ್ಲ. ಐಐಸಿ ರಚನೆಯು ಶಿಕ್ಷಣ, ಉದ್ಯಮಶೀಲತೆ, ಆವಿಷ್ಕಾರದಲ್ಲಿ ನಮಗೆ ಹೊಸ ಗತಿಯನ್ನು ನೀಡಿದೆ ಎಂದರು.

ಕೆಎಲ್​ಇ ತಾಂತ್ರಿಕ ವಿವಿ ರಿಜಿಸ್ಟ್ರಾರ್ ಡಾ. ಬಿ.ಎಸ್. ಅನಾಮಿ, ಐಸಿಸಿ ಇನ್ನೊವೇಷನ್ ಅಧಿಕಾರಿ ಅಭಿಷೇಕ ರಂಜನ್, ಪ್ರೊ. ಬಿ.ಎಲ್. ದೇಸಾಯಿ, ಮೋನಿಕಾ ಚೌಧರಿ ಇದ್ದರು. ಸಿಟೈ ನಿರ್ದೇಶಕ ಡಾ. ಶಿವಯೋಗಿ ತುರಮರಿ ಪ್ರಾಸ್ತಾವಿಕ ಮಾತನಾಡಿದರು. ಕೆಎಲ್​ಇ ತಾಂತ್ರಿಕ ವಿವಿ ಡೀನ್ ಡಾ.ಉಮಾ ಮುದೇನಗುಡಿ ವಂದಿಸಿದರು.