ಜಿಲ್ಲೆ

ಐಜಿಐಸಿಎಚ್ ಎಐ ತಂತ್ರಜ್ಞಾನ ಅಳವಡಿಕೆ

ಪಂಕಜ ಕೆ.ಎಂ. ಬೆಂಗಳೂರು

ರಾಜ್ಯದ ಸರ್ಕಾರಿ ಆಸ್ಪತ್ರೆಗಳು ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟಲಿಜೆನ್ಸ್) ತಂತ್ರಜ್ಞಾನ ಬಳಸಿಕೊಂಡು ತ್ವರಿತ ಚಿಕಿತ್ಸೆ ನೀಡುವ ದಿಸೆಯಲ್ಲಿ ಮುಂದಡಿ ಇಡುತ್ತಿದ್ದು, ಇದೀಗ ನಗರದ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ (ಐಜಿಐಸಿಎಚ್) ಈ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇದು ತ್ವರಿತ ರೋಗ ಪತ್ತೆ ಹಾಗೂ ಚಿಕಿತ್ಸೆಗೆ ಅನುಕೂಲವಾಗಲಿದೆ.

ಈ ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದಾಗಿ ಎಕ್ಸ್‌ರೇ, ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್‌ ವರದಿ ಕ್ಷಣಾರ್ಧದಲ್ಲಿ ವೈದ್ಯರ ಕೈಸೇರಲಿವೆ. ಇದರಿಂದ ರೋಗಿಯ ಆರೋಗ್ಯ ಸಮಸ್ಯೆ ಏನು ಎಂಬುದನ್ನು ಶೀಘ್ರದಲ್ಲೇ ಗುರುತಿಸಿ ತ್ವರಿತವಾಗಿ ಚಿಕಿತ್ಸೆ ನೀಡಬಹುದು ಎನ್ನುತ್ತಾರೆ ವೈದ್ಯರು.

ಸಂಸ್ಥೆಯು ಪ್ರಸ್ತುತ ಹೊಂದಿರುವ ವ್ಯವಸ್ಥೆಯಲ್ಲಿ ರೇಡಿಯಾಲಜಿ ವರದಿಗಳನ್ನು ನೀಡಲು ಗಂಟೆಗಟ್ಟಲೆ ಸಮಯವಾಗುತ್ತಿದೆ. ಆದರೆ ನೂತನ ತಂತ್ರಜ್ಞಾನ ಬಳಕೆಯಿಂದ ವರದಿಯು ಶೀಘ್ರವಾಗಿ ಸಂಬಂಧಪಟ್ಟ ವೈದ್ಯರ ಕೈಗೆಟುಕಲಿದೆ. ಮಾತ್ರವಲ್ಲ, ರೋಗಿಗಳ ವೈದ್ಯಕೀಯ ವರದಿ ದೀರ್ಘ ಕಾಲ ಸಂಗ್ರಹಿಸಿ ಇಡಬಹುದಾಗಿದೆ.

60 ಲಕ್ಷ ರೂ. ಕೊಡುಗೆ: ಟೆಲೆರಾಡ್ ಫೌಂಡೇಶನ್ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ನಿಧಿಯಡಿ ಸುಮಾರು 60 ಲಕ್ಷ ರೂ. ಮೌಲ್ಯದ ಈ ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿ ಸಂಸ್ಥೆಗೆ ಕೊಡುಗೆ ನೀಡಿದೆ. ಜತೆಗೆ 5 ವರ್ಷಗಳ ಅವಧಿಗೆ ತಾಂತ್ರಿಕ ಬೆಂಬಲದೊಂದಿಗೆ ಸ್‌ಟಾವೇರ್‌ನ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ಫೌಂಡೇಶನ್ ವಹಿಸಿಕೊಂಡಿದೆ.

ಆರೋಗ್ಯ ಸೇವೆ ಅಭಿವೃದ್ಧಿಯ ಗುರಿ: ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ವೈದ್ಯಕೀಯ ವೃತ್ತಿ ಆರಂಭಿಸಿದ ಮಕ್ಕಳ ಹೃದಯತಜ್ಞೆ ಡಾ. ಸುನೀತಾ ಮಹೇಶ್ವರಿ ಅವರ ಕನಸಿನ ಕೂಸು ಎಐ ತಂತ್ರಜ್ಞಾನ. ಸಂಸ್ಥೆಯಲ್ಲಿ ಮಕ್ಕಳಿಗಾಗಿ ಆರೋಗ್ಯಸೇವೆಯನ್ನು ಅಭಿವೃದ್ಧಿಪಡಿಸುವ ಗುರಿಯೊಂದಿಗೆ ತಮ್ಮದೇ ಆದ ‘ಟೆಲೆರಾಡ್ ಫೌಂಡೇಶನ್’ ವತಿಯಿಂದ ಮೇಕ್ ಇನ್ ಇಂಡಿಯಾ ಭಾಗವಾಗಿ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಅಗತ್ಯ ಪರಿಕರಗಳೊಂದಿಗೆ ಸಂಸ್ಥೆಗೆ ಕೊಡುಗೆ ನೀಡಿದ್ದಾರೆ.

ಸಂಸ್ಥೆಯಲ್ಲಿ ಮಕ್ಕಳ ರೇಡಿಯಾಲಜಿ ವಿಭಾಗದ ಸಾಮರ್ಥ್ಯ ಹೆಚ್ಚಿಸಲು ಈ ಕೃತಕ ಬುದ್ಧಿಮತ್ತೆ ಸಹಕಾರಿಯಾಗಲಿದೆ. ಇದರಲ್ಲಿ ರೇಡಿಯಾಲಜಿ ಮಾಹಿತಿ ವ್ಯವಸ್ಥೆ (ಆರ್‌ಐಎಸ್) ಹಾಗೂ ಪಿಕ್ಚರ್ ಆರ್ಕೈವಿಂಗ್ ಮತ್ತು ಕಮ್ಯುನಿಕೇಷನ್ ಸಿಸ್ಟಮ್ (ಪಿಎಸಿಎಸ್) ಅನ್ನು ಪರಿಚಯಿಸಲಾಗಿದೆ. ಇವು ಸಂಸ್ಥೆಯ ವೈದ್ಯಕೀಯ ಸೇವೆಯಲ್ಲಿ ದಕ್ಷತೆ ಹೆಚ್ಚಿಸಲು, ಆರ್ಥಿಕ ವೆಚ್ಚ ತಗ್ಗಿಸಲು ಹಾಗೂ ವೈದ್ಯಕೀಯ ವರದಿಯನ್ನು ತ್ವರಿತವಾಗಿ ಒದಗಿಸಲು ನೆರವಾಗಲಿದೆ. ರೋಗಿಗಳ ಕಾಯುವಿಕೆ ಸಮಯ ಕಡಿಮೆಯಾಗಲಿದೆ.

ಕೃತಕ ಬುದ್ಧಿಮತ್ತೆ ಅಳವಡಿಕೆಯಿಂದಾಗಿಇನ್ನುಮುಂದೆ ರೋಗಿಗಳು ವರದಿಗಾಗಿ ದಿನಪೂರ್ತಿ ಕಾಯುವ ಅಗತ್ಯವಿಲ್ಲ. ಅದೇ ದಿನ ವರದಿ ಪಡೆಯಬಹುದು. ಜತೆಗೆ ಇಮೇಜ್, ಫೋಟೋಗಳು ಮತ್ತು ವರದಿ ಸಾಫ್ಟ್‌ವೇರ್‌ನಲ್ಲಿ ದೀರ್ಘಕಾಲ ಉಳಿಯಲಿದೆ.ಡಾ. ಸಂಜಯ್, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ

ಈ ತಂತ್ರಜ್ಞಾನದೊಂದಿಗೆ ಸಂಸ್ಥೆಯ ಸಿಬ್ಬಂದಿಗೆ ಅಗತ್ಯ ತರಬೇತಿ ಮತ್ತು ತಾಂತ್ರಿಕ ಬೆಂಬಲ ಒದಗಿಸುವ ಮೂಲಕ ಆರೋಗ್ಯ ಸೇವೆ ಉತ್ತಮಪಡಿಸಲು ಭದ್ರ ಅಡಿಪಾಯ ಹಾಕಲಾಗಿದೆ. ಮಕ್ಕಳ ರೇಡಿಯಾಲಜಿ ವಿಭಾಗದ ಸಾಮರ್ಥ್ಯ ಹೆಚ್ಚಿಸಿ ಸುಧಾರಿತ ಆರೋಗ್ಯ ಸೇವೆ ಒದಗಿಸಲಿದೆ.

-ಡಾ. ಸುನೀತಾ ಮಹೇಶ್ವರಿ, ಟೆಲೆರಾಡ್ ಫೌಂಡೇಶನ್‌ನ ಸಹ ಸಂಸ್ಥಾಪಕಿ