ಸಿದ್ದಾಪುರ: ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನೈಮ ಸಂಘಟನೆ ರಂಜಾನ್ ಉಪವಾಸ ಆಚರಣೆಯ ಅಂಗವಾಗಿ ಬೃಹತ್ ಇಫ್ತಾರ್ ಸೌಹಾರ್ಧ ಸಂಗಮವನ್ನು ನೆಲ್ಯಹುದಿಕೇರಿ ಶಾದಿ ಮಹಲ್ ಸಮುದಾಯ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿತ್ತು.
ಉಪವಾಸ ನಿರತರಿಗೆ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಅರೆಕಾಡು, ನಲ್ವತ್ತೆಕ್ರೆ, ಸಿದ್ದಾಪುರ, ಗುಹ್ಯ, ಒಂಟಿಯಂಗಡಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಸಾವಿರಾರು ಮುಸಲ್ಮಾನರು ಪಾಲ್ಗೊಂಡಿದ್ದರು.
ಇಫ್ತಾರ್‌ನಲ್ಲಿ ವಿವಿಧ ಬಗೆಯ ಹಣ್ಣು ಹಂಪಲು, ತಂಪು ಪಾನೀಯ, ತಿಂಡಿ ತಿನಿಸುಗಳೊಂದಿಗೆ ಬಿರಿಯಾನಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮಹಲ್ ಖತೀಬ್ ರೌವೂಪ್ ಹುದವಿ ಮಾತನಾಡಿ, ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದಲ್ಲಿ ಸೌಹಾರ್ಧ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸುಂಟಿಕೊಪ್ಪದ ಪಿ.ಎಂ ಅಬ್ದುಲ್ ಲತೀಫ್ ಮಾತನಾಡಿ, ಸೌಹಾರ್ಧತೆಗೆ ಹೆಸರುವಾಸಿಯಾದ ಗ್ರಾಮದಲ್ಲಿ ನೈಮ ಸಂಘಟನೆ ಇಫ್ತಾರ್ ಕೂಟವನ್ನು ಆಯೋಜನೆ ಮಾಡುವುದು ಹೆಮ್ಮೆಯ ವಿಚಾರ ಎಂದರು.
ಸಾಮಾಜಿಕ ಕಾರ್ಯಕರ್ತ ನಿಯಾಜ್ ಮಾತನಾಡಿ ನೆಲ್ಯಹುದಿಕೇರಿ ಗ್ರಾಮದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಆರೋಗ್ಯ, ಶೈಕ್ಷಣಿಕ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಯುವ ಸಮೂಹವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿರುವ ಸಂಘಟನೆಯ ಕಾರ್ಯ ಶ್ಲಾಘನೀಯವಾದುದು ಎಂದರು.
ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಹಾಗೂ ರಾಜ್ಯ ಲೆಕ್ಕ ಪರಿಶೋಧನಾ ಇಲಾಖೆಯ ಹಿರಿಯ ಉಪ ನಿರ್ದೇಶಕ ಝೀವಲ್ ಖಾನ್ ನೈಮ ಸಂಘಟನೆ ಶೈಕ್ಷಣಿಕ ಕಾರ್ಯ ಯೋಜನೆಯ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು.
ಮಡಿಕೇರಿ ತಾಲೂಕು ಪಂಚಾಯಿತಿ ಲೆಕ್ಕ ಸಹಾಯಕ ಅಧಿಕಾರಿ ಉಸೈನ್ ಸಾಬ್ ಮುಲ್ಲಾ, ಡಿಸಿಸಿ ಸದಸ್ಯ ಕೆ.ಎಂ ಬಸೀರ್, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ. ಹಕೀಂ, ನೈಮ ಸಂಘಟನೆ ಅಧ್ಯಕ್ಷ ನೌಷದ್, ಉಪಾಧ್ಯಕ್ಷ ಅಪ್ಸಲ್, ಕಾರ್ಯದರ್ಶಿ ಮುಸ್ತಾಫಾ, ಜಂಶೀರ್, ಪಿಡಿಒ ಅಬ್ದುಲ್ಲ ಸಹಾಯಕ ಪ್ರಾಧ್ಯಾಪಕ ನೌಶಾದ್, ಮುಸ್ಲಿಂ ಜಮಾಅತ್ ಅಧ್ಯಕ್ಷ ಓ.ಎಂ. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಅಶ್ರಫ್ ಹಾಜಿ, ಎ.ಕೆ. ಅಬ್ದುಲ್ಲ ಮಣಿ ಮಾಸ್ಟರ್, ಮಸೀದಿ ಸಮಿತಿಯ ಪ್ರಮುಖರು, ವಿವಿಧ ಸಂಘಟನೆಗಳ ಮುಖಂಡರುಗಳು ಪಾಲ್ಗೊಂಡಿದ್ದರು.