ದೇವನಹಳ್ಳಿ ಪುರಸಭೆಯಲ್ಲಿ ಆಯೋಜಿಸಿದ್ದ ಆಯುಧ ಪೂಜೆ ಹಾಗೂ ಪೌರಕಾರ್ಮಿಕರ ದಿನಾಚರಣೆಯಲ್ಲಿ ಪೌರಕಾರ್ಮಿಕರನ್ನು ಸಚಿವ ಕೆ.ಎಚ್​.ಮುನಿಯಪ್ಪ ಸನ್ಮಾನಿಸಿರು. ಬಯಪ ಅಧ್ಯಕ್ಷ ಶಾಂತಕುಮಾರ್​, ದೇವನಹಳ್ಳಿ ಬಾಕ್​ ಕಾಂಗ್ರೆಸ್​ ಅಧ್ಯಕ್ಷ ಕೆ.ಸಿ.ಮಂಜುನಾಥ್​, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ.ಜಗನ್ನಾಥ್​, ಕೃಷಿ ಸಮಾಜದ ಅಧ್ಯಕ್ಷ ಎಸ್​.ಆರ್​.ರವಿಕುಮಾರ್​ ಇದ್ದರು. 
ಜಿಲ್ಲೆ

ಗುಣಮಟ್ಟದ ರಸ್ತೆ ಬೇಕೆಂದರೆ ವಿಳಂಬ ಸಹಿಸಿಕೊಳ್ಳಿ

ದೇವನಹಳ್ಳಿ : ಪ್ರತಿನಿತ್ಯ ಪಟ್ಟಣ ಸ್ವಚ್ಛಗೊಳಿಸಿ ಸುಂದರ ನಗರವನ್ನಾಗಿಸುವ ಪೌರಕಾಮಿಕರ ಸೇವೆ ಪವಿತ್ರವಾದದ್ದು, ಅಂತಹ ಕಾರ್ಮಿಕರನ್ನು ಪ್ರೋತ್ಸಾಹಿಸಿ ಸನ್ಮಾನಿಸುವ ಕಾರ್ಯ ಮಾದರಿ ಎನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್​.ಮುನಿಯಪ್ಪ ಹೇಳಿದರು.

ಪುರಸಭಾ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಆಯುಧಪೂಜೆ ಹಾಗೂ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪಾರ್ವಾಟ ಗುಡ್ಡದಲ್ಲಿ ಶುದ್ಧ ಕುಡಿಯುವ ನೀರು ಹಾಗೂ ವಸತಿ ರಹಿತ ಬಡವರಿಗೆ ನಿವೇಶನ, ಸ್ಮಶಾನಕ್ಕೆ ಜಾಗ, ಪಟ್ಟಣದ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಸೇರಿ ಹಲವು ಬೇಡಿಕೆಗಳ ಪ್ರಸ್ತಾವನೆ ಸಲ್ಲಿಸಿದ್ದೀರಿ. 25 ಕೊಟಿ ರೂ. ವೆಚ್ಚದಲ್ಲಿ ಚಿಕ್ಕಕೆರೆ ಅಭಿವೃದ್ಧಿಯನ್ನು ಬಯಪ ವತಿಯಿಂದ ಅಧ್ಯಕ್ಷ ಶಾಂತಕುಮಾರ್​ ಮಾಡಿಸುತ್ತಾರೆ. ಪಟ್ಟಣದ ಮುಖ್ಯ ಹೆದ್ದಾರಿ ರಸ್ತೆ ಕಾಮಗಾರಿ ಆಮೆ ವೇಗ ಎಂದಿದ್ದೀರಿ. ಗುಣಮಟ್ಟದ ರಸ್ತೆ ಬೇಕೆಂದರೆ ವಿಳಂಬ ಸಹಿಸಿಕೊಳ್ಳಬೇಕು. ರಸ್ತೆ ಕಾಮಗಾರಿ ಮುಗಿದ ಬಳಿಕ ಎರಡು ಬದಿಯಲ್ಲಿ ಚರಂಡಿ ಹಾಗೂ ಪಾದಚಾರಿ ರಸ್ತೆಯನ್ನೂ ಗುತ್ತಿಗೆದಾರರು ಮಾಡಲಿದ್ದಾರೆ. ಜತೆಗೆ ತಾಲೂಕಿನಲ್ಲಿ 2500 ವಸತಿ ರಹಿತರಿಗೆ ನಿವೇಶನ ನೀಡಲಾಗುತ್ತಿದೆ ಎಂದು ಹೇಳಿದರು.

ಉತ್ತಮ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಸನ್ಮಾನಿಸಿದರು. ಸಾಂಕೇತಿಕವಾಗಿ ಕೆಲವು ಪೌರಕಾರ್ಮಿಕರಿಗೆ ತಾತ್ಕಾಲಿಕ ಸ್ವಾಧಿನ ಹಕ್ಕುಪತ್ರ ವಿತರಿಸಲಾಯಿತು.

ಪುರಸಭೆ ಅಧ್ಯಕ್ಷ ಡಿ.ಎಂ.ಮುನಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಕೋಮಲಾ ನಟರಾಜ್​, ಸದಸ್ಯರಾದ ಗೀತಾ ಶ್ರೀಧರ್​, ಲೀಲಾವತಿ, ಎನ್​.ರಘು, ವೇಣುಗೋಪಾಲ್​ (ಗೋಪಿ), ಜಿ.ರೇಖಾ, ಪುಷ್ಪಲತಾ ಲಕ್ಷಿ$್ಮನಾರಾಯಣ, ಎಸ್​.ಸಿ.ಚಂದ್ರಪ್ಪ, ನೀಲೆರಿ ಮಂಜುನಾಥ್​, ಸುಮಿತ್ರಾ, ಗೋಪಮ್ಮ, ಮಂಜುಳಾ ಮೂರ್ತಿ, ಚೈತ್ರಾ ವಿಜಯಕುಮಾರ್​, ರತ್ನಮ್ಮ, ಎಸ್​.ನಾಗೇಶ್​, ಪುರಸಭೆ ಮುಖ್ಯಾಧಿಕಾರಿ ಎ.ಶಿವಮೂರ್ತಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಂಜಪ್ಪ, ಕಾರ್ಯದರ್ಶಿ ಎ.ಮಂಜುನಾಥ್​, ಸಮುದಾಯ ಸಂಘಟನಾ ಅಧಿಕಾರಿ ಬೈರಪ್ಪ, ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಮ್ಯಾನೇಜರ್​ ಸರಸ್ವತಿ, ಸಿಬ್ಬಂದಿ ಇದ್ದರು.

100 ಕೋಟಿ ರೂ. ಅನುದಾನ ನೀಡಿ : ಪಟ್ಟಣಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗಾಗಿ ಪಾರ್ವಟ ಗುಡ್ಡದ ಬಳಿ 15 ಲಕ್ಷ ಲೀಟರ್​ ಸಾಮರ್ಥ್ಯದ ನೀರು ಸಂಗ್ರಹಗಾರವನ್ನು ಸ್ಥಾಪಿಸಬೇಕು. ಸ್ಮಶಾನಕ್ಕೆ ಜಾಗದ ಕೊರತೆ ಇದ್ದು, ಗೋಕರೆ ರಸ್ತೆಯ ಸ.ನಂ 236 ರಲ್ಲಿ 7.1 ಎಕರೆ ಸರ್ಕಾರಿ ಜಾಗವನ್ನು ಪುರಸಭೆಗೆ ಹಸ್ತಾಂತರಿಸಬೇಕು ಎಂದು ಪುರಸಭೆ ಉಪಾಧ್ಯಕ್ಷ ಜಿ.ಎ.ರವೀಂದ್ರ ಮನವಿ ಮಾಡಿದರು. ವಸತಿ ರಹಿತ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸರ್ಕಾರದಿಂದ ಭೂಮಿ ಖರೀದಿಸಿಯಾದರೂ ಅಥವಾ ಸರ್ಕಾರಿ ಜಾಗವನ್ನು ಗುರುತಿಸಿಕೋಡಬೇಕು. ಆಮೆಗತಿಯಲ್ಲಿ ಸಾಗುತ್ತಿರುವ ಸಿಸಿ ರಸ್ತೆ ಕಾಮಗಾರಿಯ ವೇಗ ಹೆಚ್ಚಿಸಿ ರಸ್ತೆ ಇನ್ನಷ್ಟು ಅಗಲೀಕರಣ ಮಾಡಿ ಎರಡು ಬದಿಯಲ್ಲಿ ಚರಂಡಿ ನಿರ್ಮಿಸಿಕೊಡಬೇಕು. ಪೌರಕಾರ್ಮಿಕರ ಮತ್ತು ಪುರಸಭೆಗೆ ಸಿಬ್ಬಂದಿ ಕೊರತೆ ಇದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿಕೊಡಬೇಕು. ಪಟ್ಟಣದ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ನೀಡಬೇಕು ಎಂದು ಪ್ರಸ್ತಾವನೆ ಮಾಡಿದರು.