ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದಲ್ಲಿ ಶಾಂತಿ, ನೆಮ್ಮದಿ ಕದಡುವ ಪ್ರಯತ್ನ ಮಾಡಿದರೆ ಜೋಕೆ. ಅಂತಹವರ ಮೇಲೆ ಹದ್ದಿನ ಕಣ್ಣಿಡಲು ಮೈಸೂರು ಜಿಲ್ಲಾ ಪೊಲೀಸರು ಮುಂದಾಗಿದ್ದಾರೆ.
ಫೇಸ್‌ಬುಕ್, ವಾಟ್ಸ್‌ಆ್ಯಪ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜಕ್ಕೆ ಮಾರಕವಾಗುವ ವಿಷಯಗಳನ್ನು ಹರಡುವ ವಿಕೃತ ಮನಸ್ಸಿನ ವ್ಯಕ್ತಿಗಳನ್ನು ಪತ್ತೆ ಮಾಡಿ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಲ್ಳುವ ಬಗ್ಗೆ ಎಚ್ಚರಿಕೆ ನೀಡುವ ಪ್ರಯತ್ನ ಮಾಡಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಅವರು ಸೋಶಿಯಲ್ ಮೀಡಿಯಾ ಮೇಲೆ ಕಣ್ಣಿಡಲು ಜಿಲ್ಲೆಯಲ್ಲಿ ಪ್ರತ್ಯೇಕ ವಿಭಾಗವನ್ನೇ ತೆರೆದಿದ್ದಾರೆ. ಕಂಪ್ಯೂಟರ್ ವಿಷಯದಲ್ಲಿ ತಾಂತ್ರಿಕ ಪರಿಣತಿ ಪಡೆದಿರುವ ಸಿಬ್ಬಂದಿಯನ್ನು ಸೇರಿಸಿಕೊಂಡು ಜಿಲ್ಲಾ ಮಟ್ಟದಲ್ಲಿ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಸ್ಥಾಪಿಸಿದ್ದಾರೆ.
ಜಿಲ್ಲೆಯಲ್ಲಿ 26 ಪೊಲೀಸ್ ಠಾಣೆಗಳಿದ್ದು, ಪ್ರತಿ ಪೊಲೀಸ್ ಠಾಣೆಯಲ್ಲಿ ತಾಂತ್ರಿಕ ಪರಿಣತಿ ಹೊಂದಿರುವ ಒಬ್ಬರನ್ನು ಆಯ್ಕೆ ಮಾಡಲಾಗಿದ್ದು, 26 ಸಿಬ್ಬಂದಿಗೆ ವಿಶೇಷವಾಗಿ ತರಬೇತಿ ನೀಡಲಾಗಿದೆ. ಇವರು ತಮ್ಮ ಠಾಣಾ ವ್ಯಾಪ್ತಿಯಲ್ಲಿ ಯಾರಾದರೂ ಸಾಮಾಜಿಕ ಜಾಲತಾಣ ಬಳಸಿಕೊಂಡು ಸಮಾಜದ ಶಾಂತಿ-ನೆಮ್ಮದಿಗೆ ಭಂಗ ತರುವ ಪ್ರಯತ್ನ ಮಾಡುತ್ತಿದ್ದರೆ ಅಂತಹವರನ್ನು ಪತ್ತೆ ಹಚ್ಚುವ ಜವಾಬ್ದಾರಿ ಈ ತಂಡದ ಮೇಲಿದೆ. ಈ ತಂಡದ ನಡುವೆ ಸಂವಹನ ಸಾಧಿಸಲು ಎಸ್ಪಿ ಕಚೇರಿಯಲ್ಲಿ ಪ್ರತ್ಯೇಕ ವಿಭಾಗವನ್ನು ತೆರೆಯಾಗಿದ್ದು, ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಜಿಲ್ಲೆಯಲ್ಲಿನ ಆಗು-ಹೋಗುಗಳ ಬಗ್ಗೆ ಮಾಹಿತಿ ಕಲೆ ಹಾಕಿ ಎಸ್ಪಿ ಅವರಿಗೆ ವರದಿ ನೀಡಲಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಶಾಂತಿ, ನೆಮ್ಮದಿಗೆ ಭಂಗ ತರುವ ವ್ಯಕ್ತಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡಲಾಗುತ್ತಿದೆ. ಈಗಾಗಲೇ ನಂಜನಗೂಡಿನಲ್ಲಿ ಇದೇ ರೀತಿ ಸಾಮಾಜಿಕ ಜಾಲತಾಣ ಬಳಸಿಕೊಂಡು ಸಮಾಜದ ಶಾಂತಿ ಕದಡಲು ಯತ್ನಿಸಿದ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎನ್ನುತ್ತಾರೆ ಎಸ್ಪಿ ಸೀಮಾ ಲಾಟ್ಕರ್.
26 ಠಾಣೆಗಳ 26 ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಂಡು ಎಸ್ಪಿ ಕಚೇರಿಯಲ್ಲಿ ಪ್ರತ್ಯೇಕ ವಿಂಗ್ ಸ್ಥಾಪಿಸಲಾಗಿದೆ. ಇಲ್ಲಿನ ಕಚೇರಿಯಲ್ಲಿ ಇಬ್ಬರು ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ ಠಾಣಾ ಮಟ್ಟದಲ್ಲಿ ನಡೆಯಲಿರುವ ವಿದ್ಯಮಾನಗಳನ್ನು ಗಮನಿಸಲಿದ್ದಾರೆ.ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ