ಜಿಲ್ಲೆ

ಯೋಚನೆ ಬಿಟ್ಟು ಕೆಲಸ ಮಾಡಿದರೆ ಯಶಸ್ಸು

ಉತ್ತರ ಕನ್ನಡ ಡೆಸ್ಕ್

ಶಿರಸಿ: ಮುಂಗಾರು ಮಳೆಯ ಎದುರಿನಲ್ಲಿ ಹಸಿರು ಹೊತ್ತು ಬರುವ ಪ್ರಮೀಳೆಯರೆಲ್ಲ ಒಂದೆಡೆ ಸೇರಿ ಸಂಭ್ರಮಿಸುವ ಮಲೆನಾಡು ಮೇಳ ಗುರುವಾರ ನಗರದ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಹೊನ್ನೆಮರಡಿನ ಭಾರತೀಯ ಸಾಹಸ ಸಮನ್ವಯ ಕೇಂದ್ರದ ನಿರ್ದೇಶಕಿ ನೊಮಿತೊ ಕಾಮದಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಯೋಚಿಸುವುದಕ್ಕಿಂತ ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸು ಕಾಣಬಹುದು. ವರ್ತಮಾನದ ಹವಾಮಾನ ಬಿಕ್ಕಟ್ಟು ನಿವಾರಣೆಗೆ ಸುಸ್ಥಿರ ಕೈದೋಟ ನಿರ್ವಹಣೆ ಉತ್ತರವಾಗಬಲ್ಲದು ಎಂದರು.

ಟೀಡ್ ಸಂಸ್ಥೆಯ ಮೋಹಿನಿ ಪೂಜಾರಿ ಮಾತನಾಡಿ, ಮಹಿಳೆ ಮತ್ತು ಪ್ರಕೃತಿಗೆ ಅವಿನಾಭಾವ ಸಂಬಂಧವಿದೆ. ಪರಿಸರಕ್ಕೆ ಸ್ವಲ್ಪ ಏರುಪೇರಾದರೂ ಮನೋಸ್ಥೈರ್ಯಕ್ಕೆ ಪೆಟ್ಟು ಬೀಳುತ್ತದೆ. ಇದನ್ನು ಪ್ರತಿಯೊಬ್ಬರೂ ಅರಿಯಬೇಕು. ಸಾವಯವದ ಬಳಕೆ ವಿಸ್ತರಿಸಬೇಕು ಎಂದರು.

ವನಸ್ತ್ರೀ ಸಂಘಟನೆ ಆಯೋಜಿಸಿದ್ದ 20ನೇ ವರ್ಷದ ಮಲೆನಾಡು ಮೇಳದಲ್ಲಿ 25ಕ್ಕೂ ಹೆಚ್ಚು ಮಳಿಗೆಗಳಿದ್ದವು. ಎಲ್ಲ ಮಳಿಗೆಗಳಲ್ಲೂ ಮಹಿಳೆಯರೇ ವ್ಯಾಪಾರಸ್ಥರು. ಗ್ರಾಹಕರಲ್ಲೂ ಬಹುಸಂಖ್ಯಾತರು ಮಹಿಳೆಯರೇ ಇದ್ದರು.

ಹಲಸಿನ ಹಪ್ಪಳ, ಚಿಪ್ಸ್, ಮಿಡಿ ಉಪ್ಪಿನಕಾಯಿ, ಲಿಂಬು ಉಪ್ಪಿನಕಾಯಿ, ಸುಕ್ಕೇಳಿ, ಲವಂಗ, ಜಾಯಿಕಾಯಿ, ನೆಲ್ಲಿಪುಡಿ, ಸೋಪಿನಪುಡಿ, ಕಷಾಯ ಪುಡಿ, ಔಷಧ ಎಣ್ಣೆ, ಮುರುಗಲು ಎಣ್ಣೆ, ಸಣ್ಣ ಮೆಣಸು, ಮಗೆಕಾಯಿ, ಅರಿಸಿನ, ಮಜ್ಜಿಗೆ ಮೆಣಸು, ಹೂ ಗಿಡದ ಹೆಣೆಗಳು, ಡೇರೆ ಗಡ್ಡೆ, ಹಣ್ಣು- ಹಂಪಲು, ಗೆಡ್ಡೆಗೆಣಸು, ಕುರುಕಲು ತಿನಿಸು ಹೀಗೆ ಹಳ್ಳಿಯ ವಿಶೇಷತೆಗಳನ್ನು ಹೊತ್ತು ತಂದಿದ್ದ ಮಹಿಳೆಯರು, ನಗರವಾಸಿಗಳ ಮನಗೆದ್ದರು.

ಭಂಡಾರಕೇರಿ, ಅಶೀಸರ, ಸಂಪೇಸರ, ಬಿಸಲಕೊಪ್ಪ, ಕೋಡಿಗಾರ, ಬೆಳಖಂಡ, ಮತ್ತಿಘಟ್ಟ, ಕುಂದಾಪುರದ ನಮ್ಮ ಭೂಮಿ, ಟೀಡ್, ಕಲಗಾರ್, ಸೋಂದಾ, ವಾನಳ್ಳಿ, ಬೊಪ್ಪನಳ್ಳಿ, ಗೋಳಿಕೊಪ್ಪ, ಖೂರ್ಸೆ ಕಾಂಪೌಂಡ್, ಹುಲೇಕಲ್, ಹೂತನ ಜಾನ್ಮನೆ ಸ್ವಸಹಾಯ ಸಂಘದ ಸದಸ್ಯರು ಭಾಗವಹಿಸಿದ್ದರು.

ಈ ವೇಳೆ ಬೀಜ ಸಂರಕ್ಷಣೆ ಮಾಡುತ್ತಿರುವ ಹೂತನ ಜಾನ್ಮನೆಯ ಭಾನುಮತಿ ಎನ್.ಕೆ., ವಸುಮತಿ ಎನ್.ಕೆ, ದೇವತೆಮನೆಯ ರಾಧಾ ಭಟ್, ಕೂಗಲಕುಳಿಯ ಸುಕನ್ಯಾ ಹೆಗಡೆ, ಭಾಗ್ಯಾ ಭಟ್ ಅವರನ್ನು ಗೌರವಿಸಲಾಯಿತು.
ವನಸ್ತ್ರೀ ಸಂಘಟನೆಯ ಹಿರಿಯ ಸದಸ್ಯೆ ಲಕ್ಷ್ಮೀ ಹೆಗಡೆ , ಟ್ರಸ್ಟಿಗಳಾದ ಸುನೀತಾ ರಾವ್, ಶ್ಯಾಮಲಾ ಹೆಗಡೆ, ಶೈಲಜಾ ಗೋರ್ನಮನೆ ಇದ್ದರು.