ಜಿಲ್ಲೆ

ನಿರಾಸಕ್ತಿ ತೋರಿದರೆ ಕ್ರೀಡಾಕೂಟವೇ ಬಂದ್

ಕುಮಟಾ: ದಸರಾ ಕ್ರಿಡಾಕೂಟಗಳಿಗೆ ಕ್ರೀಡಾಳುಗಳು ನಿರಾಸಕ್ತಿ ತೋರಿದರೆ ಮುಂದಿನ ವರ್ಷಗಳಲ್ಲಿ ದಸರಾ ಕ್ರೀಡಾಕೂಟವನ್ನೇ ಬಂದ್ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಶಾಸಕ ದಿನಕರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.

ಪಟ್ಟಣದ ಮಣಕಿ ಮೈದಾನದಲ್ಲಿ ಸೋಮವಾರ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಇಂದಿನ ಕ್ರೀಡಾಕೂಟಕ್ಕೆ ಇಷ್ಟೊಂದು ಕಡಿಮೆ ಪ್ರಮಾಣದಲ್ಲಿ ಕ್ರೀಡಾಳುಗಳ ಆಗಮನ ಹಿಂದೆಂದೂ ಕಂಡಿಲ್ಲ. ಸರ್ಕಾರ ಕ್ರೀಡಾಕೂಟ ಆಯೋಜಿಸಿ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಕ್ರೀಡಾಳುಗಳನ್ನು ಪ್ರೋತ್ಸಾಹಿಸುತ್ತದೆ. ಆರೋಗ್ಯ ಹಾಗೂ ಕ್ರೀಡಾಸಾಧನೆಯ ಗುರಿಯಿಂದ ಕ್ರೀಡಾಕೂಟ ಆಯೋಜಿಸಿದ್ದು ವ್ಯರ್ಥವಾಗಬಾರದು. ದಸರಾ ಕ್ರಿಡಾಕೂಟ ಆಯೋಜಕರು, ಸಂಯೋಜಕರು ಕ್ರೀಡಾಳುಗಳನ್ನು ಕರೆತರುವ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಪ್ರಯತ್ನಿಸಬೇಕು. ಕ್ರೀಡಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮನೋಭಾವನೆಯನ್ನು ಬೆಳೆಸಬೇಕಿದೆ ಎಂದರು.

ಕುಮಟಾ ಕೆಪಿಎಸ್ ಕಾಲೇಜು ಅಭಿವೃದ್ಧಿಗಾಗಿ 4 ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ. ಮುಂದಿನ ದಿನದಲ್ಲಿ ಕುಮಟಾದ ನೆಲ್ಲಿಕೇರಿ ಕೆಪಿಎಸ್ ಶಾಲೆ ಜಿಲ್ಲೆಯಲ್ಲಿ ಉತ್ತಮ ಶಾಲೆಯಾಗಿ ಹೊರಹೊಮ್ಮಲಿದೆ. ಸಾವಿರಾರು ವಿದ್ಯಾರ್ಥಿಗಳು ಇಲ್ಲಿದ್ದಾರೆ. ಶಿಕ್ಷಣಕ್ಕೆ ಮೊದಲ ಅದ್ಯತೆ ನೀಡುತ್ತಿದ್ದೇವೆ ಎಂದರು. ತಾಪಂ ಇಒ ರಾಜೇಂದ್ರ ಭಟ್ಟ ಇದ್ದರು. ಯೋಗೀಶ ಪಟಗಾರ ನಿರ್ವಹಿಸಿದರು.