ಲಿಂಗಸುಗೂರು ಸಮೀಪದ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದಲ್ಲಿ ಏರ್ಪಡಿಸಿದ್ದ ಶ್ರೀಮಠದ ಮುರುಘೇಂದ್ರ ಶ್ರೀಗಳ 33ನೇ ಗುರುವಂದನೆ ಕಾರ್ಯಕ್ರಮ ಮತ್ತು 63 ಗುರು ಜಂಗಮರ ಪಾದಪೂಜೆ ಕಾರ್ಯಕ್ರಮವನ್ನು ಅನ್ನದಾನೇಶ್ವರ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರ ಶಿವಯೋಗಿಗಳು ಉದ್ಘಾಟಿಸಿದರು.ಎಮ್ಮಿಗನೂರು ವಾಮದೇವ ಶಿವಾಚಾರ್ಯರು, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ನಿಜಾನಂದ ಶ್ರೀಗಳು, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು ಇತರರಿದ್ದರು. 
ಜಿಲ್ಲೆ

ಗುರುವಿನ ಸೇವೆ ಮಾಡಿದರೆ ಸಿಗಲಿದೆ ಜೀವನ್ಮುಕ್ತಿ

ಲಿಂಗಸುಗೂರು: ವೇದ, ಶಾಸ್ತ್ರ, ಆಗಮಗಳಿಗೆ ಮೌಲ್ಯ ತಂದು ಕೊಡುವುದೇ ಜಂಗಮ ತತ್ವವಾಗಿದೆ. ಗುರುವಿನ ಗುರುವೇ ಜಂಗಮ ತತ್ವವೆಂಬುದು ಬಸವಣ್ಣನವರ ಸಿದ್ಧಾಂತ ಮತ್ತು ವಿಶಾಲತೆ ತೋರಿಸುತ್ತದೆ ಎಂದು ಮುಂಡರಗಿಯ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ.ಅನ್ನದಾನೇಶ್ವರ ಶಿವಯೋಗಿಗಳು ಹೇಳಿದರು.

ತಾಲೂಕಿನ ಯರಡೋಣ ಕ್ರಾಸ್‌ನ ಸಿದ್ಧರಾಮೇಶ್ವರ ಗುರುಮಠದಲ್ಲಿ ನೂತನ ದಾಸೋಹ ಭವನ ಲೋಕಾರ್ಪಣೆ, ಶ್ರೀಮಠದ ಮುರುಘೇಂದ್ರ ಶ್ರೀಗಳ 33ನೇ ಗುರುವಂದನೆ ಮತ್ತು 63 ಗುರು ಜಂಗಮರ ಪಾದಪೂಜೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಆಶೀರ್ವಚನ ನೀಡಿದರು.

ಜಂಗಮನನ್ನು ಆರಾಧಿಸುವ ಭಕ್ತರು ಕೂಡ ಪುಣ್ಯವಂತರು. ಗುರು ಜಂಗಮರ ಪಾದಸ್ಪರ್ಶದಿಂದ ನೆಲವೇ ಸುಕ್ಷೇತ್ರ ಮತ್ತು ಜಲವೇ ತೀರ್ಥವಾಗಲಿದೆ. ಸುಕ್ಷೇತ್ರ ಅಮರೇಶ್ವರ ದೇವರ ನೆಲೆಬೀಡು ಮತ್ತು 12 ನೇ ಶತಮಾನದ ಆಯ್ದಕ್ಕಿ ಲಕ್ಕಮ್ಮ ಮಾರಯ್ಯ ದಂಪತಿ ಕೂಡ ಯರಡೋಣಿಯ ನಿವಾಸಿಗಳಾಗಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳು 63 ಗುರು ಜಂಗಮರ ಪಾದಪೂಜೆ ಕಾರ್ಯಕ್ರಮ ಆಯೋಜಿಸುವ ಮೂಲಕ ಸುಕ್ಷೇತ್ರದ ಪಾವಿತ್ರ್ಯತೆಗೆ ಮತ್ತಷ್ಟು ಮೆರಗು ತಂದಿದ್ದಾರೆ ಎಂದರು.

ಸೂರ್ಯ, ಚಂದ್ರ, ಆತ್ಮರೇ ವೀರಶೈವ ಧರ್ಮದ ಅಷ್ಟಾವರಣದಲ್ಲಿ ಗುರು ಲಿಂಗ ಜಂಗಮರಾಗಿದ್ದಾರೆ. ಸೂರ್ಯ ಚಂದ್ರರಿಗೆ ಬೆಳಕನ್ನು ನೀಡುವುದೇ ಆತ್ಮ ತತ್ವವಾಗಿದೆ. ಇಂತಹ ಗುರು ಲಿಂಗ ಜಂಗಮರ ಆರಾಧನೆಯಿಂದ ಪಾದೋದಕ ಪ್ರಸಾದ ದೊರೆಯಲಿದೆ. ವಿಭೂತಿ, ರುದ್ರಾಕ್ಷಿ ಮತ್ತು ಮಂತ್ರಗಳು ಗಾಳಿ, ಬೆಂಕಿ, ಶಬ್ದಗಳಾಗಿವೆ. ಮನುಷ್ಯನ ಜೀವನ್ಮುಕ್ತಿಗೆ ಗುರುವಿನ ಸೇವೆ ಮಾಡಿ ಆತನ ಕರುಣೆ ಲಭಿಸಬೇಕು ಎಂದರು.

ಬಸವಾದಿ ಶಿವಶರಣರು ಕಾಯಕಕ್ಕೆ ಮಹತ್ವ ನೀಡಿದ್ದರು. ಮನುಷ್ಯ ಪ್ರಾಮಾಣಿಕವಾಗಿ ಕಾಯಕ ಮಾಡಿ ಜೀವನ ನಡೆಸಬೇಕು. ಆದರೆ ಇಂದಿನ ಸರ್ಕಾರಗಳು ಪುಕ್ಕಟೆ ಭಾಗ್ಯಗಳನ್ನು ನೀಡುವ ಮೂಲಕ ಜನರನ್ನು ಆಲಸ್ಯ, ಸೋಮಾರಿತನ, ನಿರುದ್ಯೋಗ ಸಮಸ್ಯೆಗೆ ಕಾರಣವಾಗಿ ಕಾಯಕದ ಮಹತ್ವ ಕ್ಷೀಣಿಸುತ್ತಿದೆ. ಮನುಷ್ಯ ಕಷ್ಟಪಟ್ಟು ಬೆವರು ಸುರಿಸಿ ದುಡಿದುಣ್ಣಬೇಕೇ ವಿನಃ ಪರಧನ, ಪರವಸ್ತುವನ್ನು ಮುಟ್ಟಬಾರದು ಎಂದರು.

ಎಮ್ಮಿಗನೂರು ವಾಮದೇವ ಶಿವಾಚಾರ್ಯರು ಮಾತನಾಡಿದರು. ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ನಿಜಾನಂದ ಶ್ರೀಗಳು, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ವರರುದ್ರಮುನಿ ಶಿವಾಚಾರ್ಯರು, ಶಾಂತಮಲ್ಲ ಶಿವಾಚಾರ್ಯರು, ಸೋಮನಾಥ ಶಿವಾಚಾರ್ಯರು, ಗುರುಶಾಂತಲಿಂಗ ಶಿವಾಚಾರ್ಯರು, ಮಹಾಂತ ಶಿವಾಚಾರ್ಯರು, ಗುರುಬಸವ ಶ್ರೀಗಳು, ಅಡವಿಂಗ ಮಹಾರಾಜರು, ಹಾಲವಿ ಮಹಾಂತ ಸ್ವಾಮಿಗಳು, ಹೆಬ್ಬಾಳ ನಾಗಭೂಷಣ ಶಿವಾಚಾರ್ಯರು ಇತರರಿದ್ದರು.