ಲಕ್ಷ್ಮೇಶ್ವರ: ಜನನಿ ಮತ್ತು ಜನ್ಮಭೂಮಿ ಸ್ವರ್ಗಕ್ಕಿಂತಲೂ ಮಿಗಿಲಾಗಿದ್ದು, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ ತಂದೆ-ತಾಯಿಯನ್ನು ಪೂಜ್ಯನೀಯ ಮತ್ತು ಗೌರವ ಭಾವನೆಯಿಂದ ಕಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಶ್ರೀ ಮಹಾತಪಸ್ವಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಅವಧೂತ ಕವಿಗುರುರಾಜ ಗುರೂಜಿ ಹೇಳಿದರು.
ಪಟ್ಟಣದ ಜಿ.ಎಫ್.ಉಪನಾಳ ಟ್ರಸ್ಟ್ ಶಾಂತಿಧಾಮ ವೃದ್ಧಾಶ್ರಮದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಹರಿಹರದ ಶ್ರೀಮಹಾ ತಪಸ್ವಿ ಸೇವಾ ಪ್ರತಿಷ್ಠಾನದಿಂದ ಹಮ್ಮಿಕೊಳ್ಳಲಾಗಿದ್ದ ‘ಗಡಿ ಕಾಯುವ ಗರ್ಭಗುಡಿಗೆ ನಮನ’ ಅಭಿಯಾನ ಹಾಗೂ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ಶಿಕ್ಷಣ ಜತೆಗೆ ಉತ್ತಮ ಸಂಸ್ಕಾರ, ಮೌಲ್ಯಗಳನ್ನು ಕಲಿಸಬೇಕು. ಅಂಕ ಗಳಿಕೆಗೆ ಮಾತ್ರ ಒತ್ತು ಕೊಡಬಾರದು ಎಂದು ಸಲಹೆ ನೀಡಿದರು.
ಅಂಗವಿಕಲರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ಪ್ರತಿಷ್ಠಾನ ಅಧ್ಯಕ್ಷೆ ಕೆ.ಸಿ. ಶಾಂತಕುಮಾರಿ, ತಹಸೀಲ್ದಾರ್ ಕೆ.ಆನಂದ ಶೀಲ, ಪುರಸಭೆ ಸದಸ್ಯರಾದ ಪ್ರವೀಣ ಬಾಳಿಕಾಯಿ, ಎಸ್.ಕೆ. ಹವಾಲ್ದಾರ್, ಪುಲಕೇಶ ಉಪನಾಳ ಮಾತನಾಡಿದರು. ಜಿ.ಎಫ್. ಉಪನಾಳ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಉಪನಾಳ, ಶೇಖರಗೌಡ ಆವೋಜಿ, ಅನಿಲಕುಮಾರ ಶೆಲ್ಲಿಕೇರಿ, ತಿರಕನಗೌಡ ಬಮ್ಮನಗೌಡ್ರ, ಜಯಕುಮಾರ ಸಾಂಬ್ರಾಣಿ, ರವೀಂದ್ರ ಕಪಲಿ, ಕಿರಣಕುಮಾರ ಅಂಗಡಿ, ನೀಲಮ್ಮ ದಾಸಪ್ಪನವರ, ಎಸ್.ಜೆ.ಹೂವಿನ ಇತರರಿದ್ದರು. ರತ್ನಾ ಕುಂಬಾರ, ವೀರೇಶ ಹಿರೇಮಠ ನಿರೂಪಿಸಿದರು.