ಸೊರಬ ತಾಲೂಕಿನ ತಳಬೈಲು ಗ್ರಾಮದ ಶನೇಶ್ಚರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರಾವಣ ಕಾರ್ಯಕ್ರಮದಲ್ಲಿ ಹರಿಹರದ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. 
ಜಿಲ್ಲೆ

ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ದೇಹವೇ ದೇಗುಲ: ಶ್ರೀ ವಚನಾನಂದ ಸ್ವಾಮೀಜಿ

ಸೊರಬ: ಪಾಪಮುಕ್ತ ಕ್ಷೇತ್ರದಲ್ಲಿ ಈಶ್ವರನ ಪ್ರತಿರೂಪ, ಶಕ್ತಿಯ ಸ್ವರೂಪ ಪಾರ್ವತಿ ದೇವಿ ನೆಲೆಸಿದ್ದು ಶಿವ ಶಕ್ತಿಯ ಸ್ವರೂಪನಾದ ಶನೇಶ್ಚರ ಸ್ವಾಮಿಯ ದರ್ಶನದಿಂದ ಪುಣ್ಯ ಲಭಿಸುತ್ತದೆ ಎಂದು ಹರಿಹರದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.

ಸೊಮವಾರ ತಾಲೂಕಿನ ತಳೆಬೈಲು ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಶುದ್ಧ ಮನಸ್ಸಿನಿಂದ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ. ಕೆಟ್ಟ ಗುಣಗಳು ನಾಶವಾಗಿ ಉತ್ತಮ ಭಾವನೆಗಳಿಂದ ದೇಹ ಸದೃಢಗೊಳ್ಳಿತ್ತದೆ ಎಂದರು.
ಪ್ರತಿಯೊಬ್ಬರು ದೇಹದ ಅಂಗಾಂಗಳ ರಚನೆ, ಅವುಗಳ ಕಾರ್ಯ ವೈಖರಿ ಮತ್ತು ವೈಫಲ್ಯಗಳ ಬಗ್ಗೆ ಅರಿತುಕೊಂಡರೆ ವೈದ್ಯರು ಬೇಕಾಗಿಲ್ಲ. ಶುದ್ಧ ಮನಸ್ಸಿನಿಂದ ಪ್ರಾರ್ಥಿಸಿದರೆ ದೇಹವೇ ದೇಗುಲವಾಗುತ್ತದೆ. ಮನಸ್ಸು ಶುದ್ಧವಾಗಿದ್ದರೆ ಮನೆಯೂ ಶುದ್ಧವಾಗಿರುತ್ತದೆ ಎಂದರು.
ಶನೇಶ್ಚರ ಸ್ವಾಮಿ, ಚೌಡೇಶ್ವರಿ ದೇವಿಗೆ ಹೋಮ, ವೇದಘೋಷ, ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಧರ್ಮದರ್ಶಿ ಶ್ರೀ ಪುಟ್ಟರಾಜ ಸ್ವಾಮೀಜಿ, ಪ್ಯಾಟಿ ಈರಣ್ಣ, ವೈಭವ ಶಿವಣ್ಣ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಜಿ.ಚಂದ್ರಪ್ಪ, ಸಿ. ಬಸವರಾಜ, ಮಂಜಣ್ಣ, ರುದ್ರಮುನಿ ಇದ್ದರು.

ಜಿಲ್ಲೆಗೆ ಸಂಸದ ಕೊಡುಗೆ ಅಪಾರ
ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ತಳೆಬೈಲು ಗ್ರಾಮದ ಶನೇಶ್ಚರ ದೇವಸ್ಥಾನದ ಕಟ್ಟಡಕ್ಕೆ 30 ಲಕ್ಷ ರೂ. ಕೊಟ್ಟಿರುವುದು ಹೆಮ್ಮೆ ಪಡುವಂತಹದ್ದಾಗಿದೆ. ಸಂಸದರು ಶಿಕಾರಿಪುರ ಮಾತ್ರವಲ್ಲದೆ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೂ ಸಹಕರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಕಾರದಿಂದ ಜಿಲ್ಲೆಗೆ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸಿದ್ದು, ಇದರಿಂದ ವಿದೇಶಿಗರು ಬಂಡವಾಳ ಹೂಡಿ ಕೈಗಾರಿಕೆಯನ್ನು ಪ್ರಾರಂಭಿಸಲು ಅನುಕೂಲವಾಗಿದೆ ಎಂದು ಹರಿಹರದ ಶ್ರೀ ವಚನಾನಂದ ಸ್ವಾಮೀಜಿ ಹೇಳಿದರು.