ರಾಮದುರ್ಗ: ಸತ್ಯ, ಶುದ್ಧ ಕಾಯಕದೊಂದಿಗೆ ಧರ್ಮಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ನೆಮ್ಮದಿ ಜೀವನ ನಡೆಸಲು ಸಾಧ್ಯ. ಕವಲುದಾರಿಯಲ್ಲಿ ನಡೆಯುತ್ತಿರುವ ನಾಗರಿಕರನ್ನು ಸರಿದಾರಿಗೆ ತರುವ ಗುರುತರ ಜವಾಬ್ದಾರಿ ನಾಡಿನ ಸಾಧು, ಸಂತರ ಮೇಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಚಿಪ್ಪಲಕಟ್ಟಿ ಗ್ರಾಮದ ರಂಭಾಪುರಿ ವೀರಸಿಂಹಾಸನ ಶಾಖಾ ಸಂಸ್ಥಾನ ಹಿರೇಮಠದಲ್ಲಿ ಬ್ರಹ್ಮೈಕ್ಯ ಮಹಾದೇವಯ್ಯ ಶ್ರೀಗಳ ಶತಮಾನೋತ್ಸವ, ಡಾ.ಕಲ್ಮೇಶ್ವರ ಶ್ರೀಗಳ ಷಷ್ಟೃಬ್ದಿ ಕಾರ್ಯಕ್ರಮದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧರ್ಮ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ವಿಪ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಠದ ಗುರುಗಳು ಹಾಗೂ ಜನತೆಯ ಮಧ್ಯೆ ತಾಯಿ-ಮಕ್ಕಳ ಸಂಬಂಧವಿರುತ್ತದೆ. ಧರ್ಮ ರಕ್ಷಣೆಯಿಂದ ಸಮಾಜದಲ್ಲಿ ಒಗ್ಗಟ್ಟು ಮೂಡಲಿದೆ. ಹಿಂದೆ 1972ರಲ್ಲಿ ಸರ್ಕಾರ ಹಾವನೂರ ಆಯೋಗದಿಂದ ಒಳಪಂಡಗಳ ಆಧಾರದ ಮೇಲೆ ಸಮಾಜ ಒಡೆಯುವ ಕೆಲಸ ಮಾಡಿದೆ. ದಾವಣಗೇರಿಯಲ್ಲಿ ಜು.21 ಮತ್ತು 22 ರಂದು ನಡೆಯಲಿರುವ ಪೀಠಾಚಾರ್ಯ-ಶಿವಾಚಾರ್ಯರ ಶಂಗ ಸಭೆಯಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು.
ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಮಾತನಾಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕಟಕೋಳ ಎಂ.ಚಂದರಗಿಯ ವೀರಭದ್ರ ಶಿವಯೋಗಿ ಶಿವಾಚಾರ್ಯರು, ಹರ್ಲಾಪುರ ಢವಳೇಶ್ವರ ಮಠದ ರೇಣುಕ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಚಿಪ್ಪಲಕಟ್ಟಿ ಮಠದ ಡಾ. ಕಲ್ಮೇಶ್ವರ ಸ್ವಾಮೀಜಿ ಷಷ್ಟ್ಯಬ್ದಿ ಕಾರ್ಯಕ್ರಮ ಆಚರಿಸಿ, 60 ಪರಮಪೂಜ್ಯರ ಪಾದಪೂಜೆ, 60 ಮಾಜಿ ಸೈನಿಕರು, 60 ರೈತರು ಸೇರಿ ಹಲವು ಸಾಧಕರನ್ನು ಸತ್ಕರಿಸಿದರು. ಚಿಪ್ಪಲಕಟ್ಟಿ ಜ್ಯೋತಿ, ದೈವಿ ವರವು, ಬಾಳಿಗೆ ಬೆಳಕು ಮತ್ತು ವಚನ ಸಿರಿ ಎಂಬ ನಾಲ್ಕು ಪುಸ್ತಕಗಳನ್ನು ಶ್ರೀಗಳು ಬಿಡುಗಡೆಗೊಳಿಸಿದರು.