ಜಿಲ್ಲೆ

ಪ್ರವಚನ ಕೇಳಿದರೆ ಮನದ ಗೊಂದಲ ದೂರ

ಹೊಳೆಆಲೂರ: ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಮತಾಂಧರು ವಿಜೃಂಭಿಸಿ ಸಮಾಜದಲ್ಲಿ ಆಶಾಂತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಆದರೆ ಭಾರತದ ಸನಾತನ ಧರ್ಮವನ್ನು ಜಗತ್ತಿನ ಯಾವ ಶಕ್ತಿವೂ ನಾಶ ಮಾಡದು ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ಗ್ರಾಮದ ಶ್ರೀ ವೀರಭದ್ರೇಶ್ವರ ಸೇವಾ ಸಮಿತಿ ವತಿಯಿಂದ ಶಿವಪಾರ್ವತಿ ಮಾಂಗಲ್ಯ ಮಂದಿರದ ಆವರಣದಲ್ಲಿ ನಿರ್ಮಾಣವಾಗಿರುವ ಭದ್ರಕಾಳಿ ಸಮೇತ ಶ್ರೀ ವೀರಭದ್ರಸ್ವಾಮಿ ಹಾಗೂ ಶ್ರೀ ಸುಬ್ರಮಣ್ಯಸ್ವಾಮಿ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳಿಂದ ಗುರುವಾರ ಆರಂಭವಾದ ಪ್ರವಚನ ಉದ್ಘಾಟಿಸಿ ಮಾತನಾಡಿದರು.

ಪ್ರವಚನ ಕೇಳಿದರೆ ಮನದ ಗೊಂದಲ ದೂರವಾಗಿ ಬದಲಾವಣೆ ಮೂಡುತ್ತದೆ. ಸಮಾಜ ಸುಂದರವಾಗಲು ಪರಂಪರೆ ಪಾಲನೆಯ ಜತೆಗೆ ನಮ್ಮ ಮಕ್ಕಳು ಹಾಗೂ ಯುವಕರನ್ನು ಧಾರ್ಮಿಕ ಕಾರ್ಯಗಳಲ್ಲಿ ಜೋಡಸುವಂತಹ ಕಾರ್ಯ ಮಾಡಬೇಕಾಗಿದೆ. ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಧರ್ಮ ಹಾಗೂ ಸಮಾಜ ರಕ್ಷಣೆಯ ಪವಿತ್ರ ಕಾಯಕ ಮಾಡುತ್ತಿದ್ದಾರೆ. ಪ್ರವಚನದ ಪ್ರಸಾದ ಸೇವೆಗೆ ವೈಯಕ್ತಿಕವಾಗಿ ಒಂದು ಲಕ್ಷ ದೇಣಿಗೆ ನೀಡುವದಾಗಿ ಹೇಳಿದರು.

ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಅಂತರಂಗದಲ್ಲಿ ಪ್ರಕಾಶಮಾನವಾದ ಜ್ಯೋತಿಯನ್ನು ಹಚ್ಚಿ ನಾನು ಯಾರು ಎಂಬ ಗುಟ್ಟನ್ನು ಬಿಡಿಸಿ, ಆತ್ಮವನ್ನು ಅರಿತುಕೊಳ್ಳುವದೇ ಅಧ್ಯಾತ್ಮ. ಗೊಂದಲದ ಮನಸನ್ನು ಶಾಂತಗೊಳಿಸಿ, ಸನ್ಮಾರ್ಗದತ್ತ ಕೊಂಡೊಯ್ಯುವುದೇ ಪ್ರವಚನದ ಮೂಲ ಉದ್ದೇಶ. ಸ್ವಾಮೀಜಿಗಳಾದವರು ಸಂಘ ಸಂಸ್ಥೆ, ಭೌತಿಕ ಕಟ್ಟಡ ಕಟ್ಟುವುದಕ್ಕಿಂತ ಧರ್ಮ ಕಟ್ಟುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಸದಾಶಿವ ಮಹಾಂತ ಸ್ವಾಮೀಜಿ, ಯಚ್ಚರೇಶ್ವರ ಸ್ವಾಮೀಜಿ, ಅಸೂಟಿಯ ರೇವಣಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಭದ್ರೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಚಂದ್ರಕಾಂತಗೌಡ ಬ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಕಲ್ಮೇಶ್ವರ ಸಾಸಳ್ಳಿ, ತಾಪಂ ಮಾಜಿ ಅಧ್ಯಕ್ಷ ವೀರಯ್ಯಜ್ಜ ಹಿರೇಮಠ, ಬಿಜೆಪಿ ಮುಖಂಡ ಅಶೋಕ ನವಲಗುಂದ, ಗ್ರಾಪಂ ಅಧ್ಯಕ್ಷೆ ಚಂದವ್ವ ಪೂಜಾರ, ವೀರಣ್ಣ ಯಾವಗಲ್ಲ, ಮಲ್ಲಿಕಾರ್ಜುನ ಕಂಠಿ, ಡಾ. ಅನಿಲ ಭೀಮನಗೌಡ, ಪಾಂಡುರಂಗ ಪತ್ತಾರ, ಮಹೇಂದ್ರಗೌಡ ಪಾಟೀಲ, ಶ್ರೀಶೈಲ ಬಾದಾಮಿ, ಮುತ್ತಣ ಮುದಕವಿ, ಶ್ರೀಧರ ರಮಣಿ, ಸುರೇಶ ಗಾಣಿಗೇರ, ಶಶಿಧರ ಹಿರೇಮಠ, ರಾಘವೇಂದ್ರ ಬಡಿಗೇರ, ರಾಜೇಶ ಐವಳ್ಳಿ, ರಾಘು ಗಂಗೂರ, ಈರಪ್ಪ ಹಡಪದ, ಕುಮಾರ ಮಠಪತಿ ಇತರರಿದ್ದರು.