ಬೈಲಹೊಂಗಲ: ದೇವಭಾಷೆಯಾಗಿ ಖ್ಯಾತಿ ಗಳಿಸಿದ ಸಂಸ್ಕೃತ ಸಕಲ ಭಾಷೆಗಳ ಜನನಿಯಾಗಿದೆ ಎಂದು ಇಂಚಲ ಸುಕ್ಷೇತ್ರದ ಪೂರ್ಣಾನಂದ ಭಾರತಿ ಸ್ವಾಮೀಜಿ ಹೇಳಿದರು.
ಸಮೀಪದ ಇಂಚಲ ಗ್ರಾಮದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಮತ್ತು ಸ್ಥಳೀಯ ಶಿವಯೋಗೀಶ್ವರ ಸಂಸ್ಕೃತ ಪಾಠಶಾಲೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂಸ್ಕೃತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಸ್ಕೃತ ಕಲಿತವರು ಎಲ್ಲ ಭಾಷೆಗಳನ್ನೂ ಸರಳವಾಗಿ ಕಲಿಯಬಹುದು. ವಿಜ್ಞಾನ, ಗಣಿತ, ಆಯುರ್ವೇದಕ್ಕೆ ಸಂಸ್ಕೃತ ಅಪಾರ ಕೊಡುಗೆ ನೀಡಿದೆ. ಎಲ್ಲರೂ ಸಂಸ್ಕೃತ ಕಲಿತರೆ ಜೀವನ ಸಾರ್ಥಕ ಎಂದರು.
ಬೆಳಗಾವಿ ವಲಯ ವಿಷಯ ಪರಿವೀಕ್ಷಕ ಜಗದೀಶ ಕರೆಪ್ಪನವರ ಮಾತನಾಡಿ, ಸಂಸ್ಕೃತ ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸರ್ವಧರ್ಮೀಯರ ಭಾಷೆಯಾಗಿದ್ದು, ಅದರ ಮಹತ್ವ ತಿಳಿಸುವ ಕಾರ್ಯವಾಗಬೇಕಿದೆ ಎಂದರು.
ಸಂಸ್ಥೆ ಕಾರ್ಯದರ್ಶಿ ಎಸ್.ಎನ್. ಕೊಳ್ಳಿ ಮಾತನಾಡಿ, ಸಂಸ್ಕೃತ ಪೋಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು. ಪ್ರೊ. ಮಂಜುನಾಥ ಭಟ್ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. 2024-25ನೇ ಸಾಲಿನ ಸಂಸ್ಕೃತ ಪ್ರಸಿದ್ಧ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮುಖ್ಯಶಿಕ್ಷಕ ಎಸ್.ಡಿ.ಕರಾಡೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕರಾದ ಬಿ.ಪಿ.ತುಪ್ಪದ, ಬಿ.ಎಸ್.ಮಲ್ಲೂರ, ಶಿಕ್ಷಕರಾದ ಮಲ್ಲೇಶ ಮಲಮೇತ್ರಿ, ಎಲ್.ಆರ್.ಕೇದಾರಿ, ಎಸ್.ಎಂ.ದಿನ್ನಿಮನಿ, ಕೆ.ಡಿ.ನಾಯಕ, ಪ್ರಭು ಹಿರೇಮಠ ಇತರರಿದ್ದರು.