ಕಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು, ಭಂಡಾರಿ ಶ್ರೀನಿವಾಸ್, ಡಾ. ತವರಾಜ್, ಕಾವ್ಯಾ, ಉಮೇಶ್, ಮಂಜುಳಾ, ಬಸವರಾಜ್ ಇತರರಿದ್ದರು. 
ಜಿಲ್ಲೆ

ಸೈನ್ಯಕ್ಕೆ ಸೇರುವ ಅವಕಾಶ ಸಿಕ್ಕರೆ ಮುಂದೆ ನಿಲ್ಲಿ

ಎಸ್.ಎನ್.ರವೀಂದ್ರ

ಕಡೂರು: ಸೇನೆ ಮೂಲಕ ದೇಶ ರಕ್ಷಣೆ ಸೇವೆ ಮಾಡುವ ಅವಕಾಶ ಒದಗಿಬಂದರೆ ಯುವಜನರು ಹಿಂದೆ ಸರಿಯಬಾರದು ಎಂದು ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು ತಿಳಿಸಿದರು.

ಮಂಗಳವಾರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಸ್ವಚ್ಛತೆ ಮತ್ತು ಶಿಸ್ತು ಬಹಳ ಕಡಿಮೆ. ಇವೆರಡೂ ಇಲ್ಲದ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಶಿಸ್ತು ಹಾಗೂ ಸ್ವಚ್ಛತೆ ವ್ಯಕ್ತಿತ್ವ ರೂಪಿಸುತ್ತದೆ ಎಂದರು.
ಶಾಸಕ ಕೆ.ಎಸ್.ಆನಂದ್ ಮಾತನಾಡಿ, ದೇಶವನ್ನು ರಕ್ಷಿಸಲು ಸೈನ್ಯಕ್ಕೆ ಸೇರುತ್ತೇವೆ ಎಂಬುದೇ ರೋಮಾಂಚನಕಾರಿ ಸಂಗತಿ. ಡಾಕ್ಟರ್ ಅಥವಾ ಇಂಜಿನಿಯರ್ ಆಗುವ ಗುರಿಯ ಬದಲಿಗೆ ದೇಶ ಸೇವೆ ಮಾಡಬೇಕೆಂಬ ಗುರಿಯೊಡನೆ ಸೈನ್ಯಕ್ಕೆ ಸೇರುವ ಭಾವನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಕಾವ್ಯಾ ಅವರ ಸಾಧನೆ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಲಿ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಶೈಕ್ಷಣಿಕವಾಗಿ ವಿಫಲರಾಗಿದ್ದೇವೆ ಎಂಬ ನಿರ್ಲಕ್ಷ್ಯ ಭಾವನೆ ಬೆಳೆಸಿಕೊಳ್ಳದೆ ನಿರಂತರ ಪ್ರಯತ್ನ ನಡೆಸಿದರೆ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ಹೆಚ್ಚು ವ್ಯಾಸಂಗಕ್ಕೆ ಗಮನ ಹರಿಸಬೇಕು ಎಂದು ತಿಳಿಸಿದರು.
ಐಎಫ್‌ಎಸ್ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವೈ.ಎಸ್.ಕಾವ್ಯಾ ಮಾತನಾಡಿ, ಓದು ಎಂದರೆ ಬರೀ ಬಾಯಿಪಾಠ ಮಾಡಿ ಅಂಕ ಪಡೆಯುವುದಲ್ಲ. ಪಠ್ಯದ ಸಾರಾಂಶ ಮನವರಿಕೆ ಮಾಡಿಕೊಂಡರೆ ಹೆಚ್ಚು ಅಂಕ ಪಡೆಯಬಹುದು. ಸಾಮಾಜಿಕ ಜಾಲತಾಣಗಳ ಬದುಕನ್ನು ಹೊರತುಪಡಿಸಿ ಓದಿನ ಕಡೆಗೂ ಹೆಚ್ಚು ಒತ್ತು ನೀಡಿದರೆ ಯಾವ ವಿಷಯವೂ ಕಠಿಣವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ನಿವೃತ್ತ ಉಪನ್ಯಾಸಕ ವಿ.ಉಮೇಶ್ ಮತ್ತು ವರ್ಗಾವಣೆಯಾದ ಉಪನ್ಯಾಸಕಿ ಕೆ.ಎಸ್.ಮಂಜುಳಾ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿಯಲ್ಲಿ ಕಾಲೇಜಿಗೆ ಟಾಪರ್ ಆದ ನಾಲ್ವರು ವಿದ್ಯಾರ್ಥಿಗಳಿಗೆ ಶಾಸಕ ಕೆ.ಎಸ್.ಆನಂದ್ ತಲಾ 10 ಸಾವಿರ ರೂ. ಬಹುಮಾನ ನೀಡಿದರು. ಪ್ರಾಚಾರ್ಯ ಡಾ. ತವರಾಜು, ಡಾ. ಬಸವರಾಜು, ಉಪನ್ಯಾಸಕರಾದ ಫಣಿರಾಜು, ಮನೋಹರ್, ಗಿರೀಶ್ ಇತರರಿದ್ದರು.