ಕೊಳ್ಳೇಗಾಲ: ಜಗಜ್ಯೋತಿ ಬಸವಣ್ಣನ ಕಾಯಕವೇ ಕೈಲಾಸ’ ತತ್ವವನ್ನು ಅನುಸರಿಸಿದರೆ ಪ್ರತಿಯೊಬ್ಬರು ಸಾರ್ಥಕ ಬದುಕು ಕಾಣಬಹುದು ಎಂದು ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ ಹೇಳಿದರು.
ಪಟ್ಟಣದ ಜೆಎಸ್‌ಎಸ್ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ವಿಶ್ವಗುರು ಬಸವಣ್ಣ ಕರ್ನಾಟಕದ ಸಾಂಸ್ಕೃತಿಕ ನಾಯಕ ಸಮಾರಂಭದಲ್ಲಿ ಮಾತನಾಡಿದರು.
12ನೇ ಶತಮಾನದಲ್ಲಿ ಮನುಷ್ಯ ಮನುಷ್ಯರನ್ನೇ ಮುಟ್ಟಿಸಿಕೊಳ್ಳದ ಕಾಲದಲ್ಲಿ ಬಸವಣ್ಣನ ವಚನ ಸಾಹಿತ್ಯದ ಮೂಲಕ ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಹೋರಾಟ ಮಾಡಿದ್ದಾರೆ. ಬೇರೆ ಭಾಷೆಗಳಿಗೂ ವಚನಗಳು ತರ್ಜುಮೆ ಆಗಿರುವುದು ಅದರ ಗಟ್ಟಿತನ್ನವನ್ನು ತೋರಿಸುತ್ತದೆ ಎಂದರು.
ಜೆಎಸ್‌ಎಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಮಹದೇವಸ್ವಾಮಿ ಮಾತನಾಡಿ, 12ನೇ ಶತಮಾನ ಕನ್ನಡ ಸಾಹಿತ್ಯ ಹಾಗೂ ವಚನ ಸಾಹಿತ್ಯದ ಮಹತ್ವದ ಘಟ್ಟವಾಗಿದೆ. ಈ ವೇಳೆ ಜಾತಿ, ವರ್ಣ, ಅಸಮಾನತೆ, ಲಿಂಗತಾರತಮ್ಯ, ಅಸ್ಪೃಶ್ಯತೆ, ಕಂದಾಚಾರಗಳನ್ನು ಬಸವಾದಿ ಶರಣರು ಖಂಡಿಸಿದರು. ನುಡಿದಂತೆ ನಡೆದವರು ವಚನಕಾರರು. ಮನುಷ್ಯನ ಕೇಂದ್ರವಾಗಿಟ್ಟು ಆತನ ಅಂತರಂಗ ಹಾಗೂ ಬಹಿರಂಗ ಶುದ್ಧಿಗಾಗಿ ವಚನಗಳನ್ನು ರಚಿಸಿದರು. ಕಾಯಕಕ್ಕೆ ಹೆಚ್ಚು ಒತ್ತು ನೀಡಿದರು. ಸಮ ಸಮಾಜಕ್ಕಾಗಿ ವಚನಗಳ ಮೂಲಕ ಶರಣರು ಹೋರಾಟ ಮಾಡಿದರು ಎಂದು ಹೇಳಿದರು.
ಇದಕ್ಕೂ ಮುನ್ನ ಗಣ್ಯರು ಜಗಜ್ಯೋತಿ ಬಸವಣ್ಣ ಹಾಗೂ ಕನ್ನಡಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ನಾಗರಾಜು ಕೊಂಗರಹಳ್ಳಿ, ಕಾರ್ಯದರ್ಶಿ ಸಿ.ನಾಗರಾಜು, ಜೆಎಸ್‌ಎಸ್ ಪಿಯು ಕಾಲೇಜು ಪ್ರಾಂಶುಪಾಲ ಎನ್.ಮಹದೇವಸ್ವಾಮಿ, ಬಂಡಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಂ.ಮುತ್ತುರಾಜ್, ಉಪನ್ಯಾಸಕಿ ಮಮತಾ ಇತರರು ಇದ್ದರು.