ಜಿಲ್ಲೆ

ಸುಧಾರಿಸದಿದ್ದರೆ ಗಡಿಪಾರು ಖಚಿತ

ಹುಬ್ಬಳ್ಳಿ: ದೇಹದ ತುಂಬೆಲ್ಲ ದೇವರು, ತಾಯಿಯ ಟ್ಯಾಟೂ ಹಾಕಿಸಿಕೊಂಡಿರುವ ನೀವು, ಮಾಡುವುದೆಲ್ಲ ಅನಾಚಾರ. ಈ ರೀತಿ ಮಾಡಿದರೆ ನೀವೆಲ್ಲ ಉದ್ಧಾರ ಆಗ್ತೀರಾ? ಈಗಲೂ ಕಾಲ ಮಿಂಚಿಲ್ಲ. ನೀವು ಸುಧಾರಿಸಬೇಕು. ಇಲ್ಲವಾದರೆ ಗಡಿಪಾರು ಮಾಡಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಖಡಕ್ ಎಚ್ಚರಿಕೆ ನೀಡಿದರು.

ನಗರದ ಕಾರವಾರ ರಸ್ತೆಯ ಸಿಎಆರ್ ಮೈದಾನದಲ್ಲಿ ಮಂಗಳವಾರ ಎಂಒಬಿಗಳ ಪರೇಡ್‌ನಲ್ಲಿ ಕೆಲವರ ಮಾಹಿತಿ ಪಡೆದ ಆಯುಕ್ತರು ಈ ರೀತಿಯ ಸಂದೇಶ ರವಾನಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪದೇ ಪದೆ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ, ಎಂಒಬಿ ಮತ್ತು ಸ್ವತ್ತಿನ ಅಪರಾಧ ಪ್ರಕರಣದಲ್ಲಿ ಭಾಗಿಯಾದ 930 ಆರೋಪಿಗಳನ್ನು ಕರೆ ತರಲಾಗಿದೆ. ಇವರೆಲ್ಲರ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ. ಕೆಲವರು ನಗರದ ಹೊರಗಿದ್ದಾರೆ. ಇನ್ನೂ ಕೆಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು.

ಅಪರಾಧಿತ ಪ್ರವೃತ್ತಿವುಳ್ಳವರ ಮೇಲೆ ಪೊಲೀಸ್ ಇಲಾಖೆ ತೀವ್ರ ನಿಗಾ ಇರಿಸಿದೆ. ಅವರು ಸುಧಾರಿಸಿಕೊಂಡರೆ ಒಳ್ಳೆಯದು, ಇಲ್ಲವಾದಲ್ಲಿ ಅಂಥವರನ್ನು ಗಡಿಪಾರು ಮಾಡಲಾಗುವುದು. ಅಲ್ಲದೆ, ಹತ್ತಾರು ವರ್ಷಗಳ ಹಿಂದೆ ಅಪಾರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನಂತರ ಪಶ್ಚಾತ್ತಾಪದಿಂದ ಸದ್ಯ ಸುಧಾರಿತ ಜೀವನ ನಡೆಸುತ್ತಿರುವವರೂ ಇದ್ದಾರೆ. ಅಂತಹ ಪ್ರಕರಣಗಳನ್ನು ಠಾಣಾ ವ್ಯಾಪ್ತಿಯಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ. ಅವರಿಗೂ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಮಾಡಿಕೊಡುತ್ತೇವೆ ಎಂದರು.

ಕೆಲವರ ಮೇಲೆ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಪ್ರತಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳು ಬೇರೆ ಬೇರೆ ಹೆಸರು ನೀಡಿದ್ದಾರೆ. ಹೀಗಾಗಿ ಬೆರಳಚ್ಚಿನ ಸಹಾಯದಿಂದ ಅವರನ್ನು ಗುರುತಿಸಿ ರೌಡಿಶೀಟರ್ ತೆರೆದು ಗಡಿಪಾರಿಗೆ ಆದೇಶಿಸಲಾಗುವುದು ಎಂದರು.

ಡಿಸಿಪಿಗಳಾದ ಮಹಾನಿಂಗ ನಂದಗಾಂವಿ, ಸಿ.ಆರ್. ರವೀಶ ಇತರರು ಇದ್ದರು.